ಸಿರಾ / ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬುಕ್ಕಾಪಟ್ಟಣ ಗ್ರಾಮದ ಶ್ರೀ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಬ್ಯಾನರ್ ವಿವಾದ ಉಂಟಾಗಿದ್ದು, ತಾಲೂಕು ದಂಡಾಧಿಕಾರಿ (ತಹಶೀಲ್ದಾರ್) ಆನಂದ್ ಕುಮಾರ್ ವಿರುದ್ಧ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ರಾಜೇಂದ್ರ ರಾಜಣ್ಣ ಅವರ ಅಭಿಮಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದ ವೇಳೆ ದಿಢೀರ್ ವೇದಿಕೆಗೆ ಆಗಮಿಸಿದ ರಾಜೇಂದ್ರ ರಾಜಣ್ಣ ಅವರ ಅಭಿಮಾನಿಗಳು, ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಇತರ ಎಲ್ಲಾ ಜನಪ್ರತಿನಿಧಿಗಳ ಭಾವಚಿತ್ರವನ್ನು ಮುದ್ರಿಸಿ, ಎಂಎಲ್ಸಿ ರಾಜೇಂದ್ರ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸಿರಾ ತಾಲೂಕು ದಂಡಾಧಿಕಾರಿ ಆನಂದ್ ಕುಮಾರ್ ಅವರ ಕಾರ್ಯವೈಖರಿ ಹಾಗೂ ಕರ್ತವ್ಯದ ಬಗ್ಗೆ ಇತ್ತೀಚೆಗೆ ಜನಸಾಮಾನ್ಯರಲ್ಲಿ ಬೇಸರ ಮೂಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಒಂದಲ್ಲಾ ಒಂದು ಯಡವಟ್ಟುಗಳನ್ನು ಮಾಡುತ್ತಾ ಸಾರ್ವಜನಿಕರ ಕೋಪಕ್ಕೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಶಾಸಕ ಸುರೇಶ್ ಬಾಬು ಅವರು ತಹಶೀಲ್ದಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ ಬಾಬು, “ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾವು ಚುನಾವಣೆಯಲ್ಲಿ ಆಯ್ಕೆಯಾದ ತಕ್ಷಣವೇ ‘ಮನೆ ಬಾಗಿಲಿಗೆ ಮನೆ ಮಗ’ ಎಂಬ ಯೋಜನೆಯನ್ನು ಆರಂಭಿಸಿದ್ದೆವು. ಇದೀಗ ಸರ್ಕಾರವೇ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ. ತಾಲೂಕಿನ ರೈತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಆನಂದ್ ಕುಮಾರ್, ತಾಲೂಕು ಪಂಚಾಯಿತಿ ಇಒ ಹರೀಶ್, ಕೃಷಿ ಅಧಿಕಾರಿ ಡಾ. ನಾಗರಾಜು, ಬುಕ್ಕಾಪಟ್ಟಣ ಕಂದಾಯ ಅಧಿಕಾರಿ ಸಂತೋಷ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
