ತುಮಕೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರಕ್ಕೆ ಅಕ್ಟೋಬರ್ 23ರಂದು ದ್ವೈವಾರ್ಷಿಕ ಚುನಾವಣೆ ನಡೆಸಲು ವೇಳಾಪಟ್ಟಿ ಹೊರಡಿಸಿದ್ದು, ವೇಳಾಪಟ್ಟಿಯನ್ವಯ ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರು ತಮ್ಮ ನಾಮಪತ್ರವನ್ನು ಸಲ್ಲಿಸಲು ಅಕ್ಟೋಬರ್ 6 ಕಡೆಯ ದಿನವಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಉಮೇದುವಾರರು ಅಥವಾ ಅವರ ಸೂಚಕರು ನಾಮಪತ್ರಗಳನ್ನು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭು ಜಿ. ಅವರಿಗೆ ಅಕ್ಟೋಬರ್ 6ರೊಳಗೆ ಸಲ್ಲಿಸಬಹುದು. ನಾಮಪತ್ರವನ್ನು ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು ವಿಭಾಗ, 2ನೇ ಮಹಡಿ, ಬಿ.ಎಂ.ಟಿ.ಸಿ. ಕಟ್ಟಡ, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು-560027 ಈ ವಿಳಾಸದಲ್ಲಿ ನಿಗದಿತ ದಿನಾಂಕದೊಳಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ (ಸರ್ಕಾರಿ ರಜಾ ದಿನ ಹೊರತು) ನಡುವೆ ಸಲ್ಲಿಸಬಹುದು. ನಾಮಪತ್ರದ ಸಮೂನೆಯನ್ನು ಮೇಲ್ಕಂಡ ಸ್ಥಳ ಮತ್ತು ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮಪತ್ರಗಳನ್ನು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಕ್ಟೋಬರ್ 7ರ ಬುಧವಾರದಂದು ಬೆಳಗ್ಗೆ 11 ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.
ಉಮೇದುವಾರರು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರರಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟನು ನಿರ್ದಿಷ್ಟಪಡಿಸಿದ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಇಬ್ಬರಲ್ಲೊಬ್ಬ ಅಧಿಕಾರಿಗೆ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಳ್ಳುವ ತಿಳುವಳಿಕೆ ಪತ್ರವನ್ನು ಅಕ್ಟೋಬರ್ 9ರ ಶುಕ್ರವಾರ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬಹುದು. ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಅಕ್ಟೋಬರ್ 23ರ ಶುಕ್ರವಾರದಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
