ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಗಣೇಶ ವಿಗ್ರಹ ವಿಸರ್ಜನಾ ಸಂದರ್ಭದಲ್ಲಿ ನಡೆದಿದ್ದ ಯುವಕ ಸಿಂಹಾದ್ರಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೃತ ಕುಟುಂಬದವರನ್ನು ಶಾಸಕ ಕೆ.ಎನ್. ರಾಜಣ್ಣ ಮುಖಂಡರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿ, ನ್ಯಾಯ ದೊರಕಿಸುವ ಭರವಸೆ ನೀಡಿದರು.
ಕಸಾಪುರ ಗ್ರಾಮಕ್ಕೆ ದಲಿತ ಮುಖಂಡರೊಂದಿಗೆ ಭೇಟಿ ನೀಡಿದ ಶಾಸಕರು, ನ್ಯಾಯ ಕೇವಲ ಮಾತಿನಲ್ಲಿ ಉಳಿಯಬಾರದು, ಅದು ಸಂತ್ರಸ್ತ ಕುಟುಂಬದ ಬದುಕಿನಲ್ಲಿ ಭರವಸೆಯಾಗಿ ಕಾಣಿಸಿಕೊಳ್ಳಬೇಕು ಎಂಬ ನಿಲುವಿನೊಂದಿಗೆ ಕೆಲಸ ಮಾಡುವುದು ನನ್ನ ಪ್ರಮುಖ ಕರ್ತವ್ಯ. ಇಲ್ಲಿಯ ವರೆಗೆ ದಲಿತರು ಸೇರಿದಂತೆ ಎಲ್ಲಾ ಜಾತಿಯ ಬಡವರು, ಅಸಹಾಯಕರು ಮತ್ತು ಶೋಷಿತ ವರ್ಗಗಳ ಕುಟುಂಬಗಳಿಗೆ ಧನಿಯಾಗಿ, ನನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬಂದಿದ್ದೇನೆ ಎಂದರು.
“ಈ ಪ್ರಕರಣದಲ್ಲಿ ಯಾವುದೇ ಒತ್ತಡ, ಪ್ರಭಾವ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ, ಪ್ರಕರಣದ ಸತ್ಯಾಂಶವನ್ನು ಸಂಪೂರ್ಣವಾಗಿ ಹೊರತರಲಾಗುವುದು. ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ. ಸಿಂಹಾದ್ರಿ ಅವರ ತಾಯಿ ಅನ್ನಪೂರ್ಣ ಅವರಿಗೆ ಜೀವನ ನಡೆಸಲು ಕಸಾಪುರ ವಿ.ಎಸ್.ಎಸ್.ಎನ್ನಲ್ಲಿ ಉದ್ಯೋಗ ನೀಡಲಾಗುವುದು. ಪಂಚಾಯಿತಿ ಕಡೆಯಿಂದ ನಿವೇಶನ ಮಂಜೂರು ಮಾಡಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿ, ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡುವೆ.”
— ಕೆ.ಎನ್.ರಾಜಣ್ಣ, ಶಾಸಕರು
ಕಸಾಪುರ ಗ್ರಾಮದ ದಲಿತ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಆಸಕ್ತಿ ಹೊಂದಿರುವ ಕುಟುಂಬಗಳಿಗೆ ಗೃಹ ಕೈಗಾರಿಕೆ ಆರಂಭಿಸಲು ಆರ್ಥಿಕ ನೆರವು, ಕುರಿ ಸಾಕಣೆಗೆ ಅಗತ್ಯ ಸಹಾಯ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳಡಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.
ಎಲ್ಲಾ ಜಾತಿಯಲ್ಲಿರುವ ಬಡವರು ಸೇರಿದಂತೆ, ದುರ್ಬಲರು, ಶೋಷಿತ ವರ್ಗಗಳಿಗೆ ಯಾವುದೇ ಪಕ್ಷ ಭೇದವಿಲ್ಲದೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈ ನಿರಂತರ ಕೆಲಸವನ್ನು ಮುಂದೆಯೂ ಸಹ ನಡೆಸಿ ಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಖಂಡರಾದ ಡಿ.ಎಸ್.ಮುನೀಂದ್ರಕುಮಾರ್, ಎಂ.ಎಸ್. ಮಲ್ಲಿಕಾರ್ಜುನಯ್ಯ, ಡಿವೈಎಸ್.ಪಿ ಮಂಜುನಾಥ್, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
