ಮಧುಗಿರಿ: ತೀವ್ರ ಬರಗಾಲದ ನಡುವೆಯೂ ರೈತರು ತಮ್ಮ ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದು, ಪೂರ್ವಜರ ಜಮೀನಿನ ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಸಬಾ ಕಂದಾಯ ನಿರೀಕ್ಷಕ (ಆರ್.ಐ) ನಾಗೇಶ್ ಅವರು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ವಾಸಿಯಾದ ರೇಣುಕೇಶ್ ಎಂಬುವವರು ತಮ್ಮ ತಾತನ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಆದರೆ ಈ ಕೆಲಸ ಮಾಡಿಕೊಡಲು ಕಸಬಾ ಕಂದಾಯ ಅಧಿಕಾರಿ ನಾಗೇಶ್ ಅವರು ಬರೋಬ್ಬರಿ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಮೊದಲನೇ ಕಂತಿನಲ್ಲಿ 35,000 ರೂಪಾಯಿಗಳನ್ನು ದೂರುದಾರರು ನೀಡಿದ್ದರೂ, ಕೆಲಸ ಮಾಡಿಕೊಡದೆ ಬಾಕಿ ಹಣಕ್ಕಾಗಿ ಅಧಿಕಾರಿ ಸತಾಯಿಸುತ್ತಿದ್ದರು. ಕಂದಾಯ ಅಧಿಕಾರಿಯ ಕಿರುಕುಳಕ್ಕೆ ರೋಸಿಹೋದ ದೂರುದಾರ ರೇಣುಕೇಶ್ ಅವರು ನೇರವಾಗಿ ಲೋಕಾಯುಕ್ತ ಕಚೇರಿಯ ಮೆಟ್ಟಿಲೇರಿದ್ದರು.
ಲೋಕಾಯುಕ್ತ ದಾಳಿ:
ದೂರುದಾರರ ಅಳಲನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಎಸ್ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ದಾಳಿಗೆ ತಂತ್ರ ರೂಪಿಸಲಾಯಿತು. ಇದರಂತೆ, ಗುರುವಾರ ಮಧ್ಯಾಹ್ನ ಸುಮಾರು 12:30ರ ಅವಧಿಯಲ್ಲಿ ದೂರುದಾರ ರೇಣುಕೇಶ್ ಅವರು ಎರಡನೇ ಕಂತಿನ 30,000 ರೂಪಾಯಿ ಹಣವನ್ನು ಕಂದಾಯ ಅಧಿಕಾರಿ ನಾಗೇಶ್ ಅವರಿಗೆ ನೀಡುತ್ತಿದ್ದ ವೇಳೆ, ಸ್ಥಳದಲ್ಲಿದ್ದ ಲೋಕಾಯುಕ್ತ ಪೊಲೀಸರು ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಂಜೆವರೆಗೂ ವಿಚಾರಣೆ ಮುಂದುವರಿದಿತ್ತು.
“ನಮ್ಮ ಹೋಬಳಿಗಳಲ್ಲೂ ಕೂಡ ಇದೇ ಪರಿಸ್ಥಿತಿ ಇದ್ದು, ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ನಮಗೂ ಸಹ ಇಂತಹ ಅನುಭವಗಳು ದಿನವೂ ಆಗುತ್ತಿವೆ.” ಎಂದು ಸ್ಥಳೀಯ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಚೇರಿಗಳಲ್ಲಿ ಅಧಿಕಾರಿಗಳಿಂದ ನಡೆಯುತ್ತಿರುವ ಲಂಚಾವತಾರವನ್ನು ಕೂಡಲೇ ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪಿಐಗಳಾದ ರಾಜು, ನಿರ್ಮಲಾ ದೇವಿ, ಶಾಂತಿನಾಥ್ ಹೊನ್ನೂರು ಹಾಗೂ ಸಿಬ್ಬಂದಿಗಳಾದ ನಳಿನಿ, ರಂಗಸ್ವಾಮಿ, ಪ್ರಕಾಶ್, ಮಹೇಶ್, ಗಿರೀಶ್, ನಾಗರಾಜು ಪಿ. ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
