ತುಮಕೂರು: ಹನ್ನೊಂದು ದಿನಗಳ ಕಾಲ ತುಮಕೂರು ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಲಕ್ಷಾಂತರ ಮಂದಿ ವೀಕ್ಷಕರಿಗೆ ಸಾಕ್ಷಿಯಾದ ತುಮಕೂರು ದಸರಾ 2026ಕ್ಕೆ ವಿಜಯದಶಮಿಯಂದು ಬುಧವಾರ ತೆರೆಬಿದ್ದಿತು.
ನಾಡದೇವತೆ ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯಲ್ಲಿ ಹೊತ್ತಿದ್ದ ದುಬಾರೆ ಆನೆ ಲಕ್ಷ್ಮಣ, ಸಹ ಆನೆಗಳಾದ ಲಕ್ಷ್ಮಿಯೊಂದಿಗೆ ಬಿಜಿಎಸ್ ವೃತ್ತದ ಬಳಿ ಬಂದಾಗ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ದಂಪತಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ದಂಪತಿ, ಶಾಸಕ ಜಿ. ಬಿ. ಜ್ಯೋತಿಗಣೇಶ್, ಡಿಸಿ, ಸಿಇಒ ಬಿ.ವಿ., ಎಸ್ಪಿ ಎಡಿಸಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು, ನಿಗಮ ಮಂಡಳಿ ಅಧ್ಯಕ್ಷರು, ಪ್ರಮುಖರು ಪುಷ್ಪಾರ್ಚನೆಗೈಯುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ಕೊಟ್ಟರು.
ಮೆರವಣಿಗೆಯಲ್ಲಿ ತಮಟೆ, ಹಗಲು ವೇಷ, ಹುಲಿ ವೇಷ, ಯಕ್ಷಗಾನ, ವೀರಗಾಸೆ, ಅರೆವಾದ್ಯ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ತಾಳ ಮದ್ದಳೆ ಸೇರಿದಂತೆ ನೂರಾರು ಕಲಾ ತಂಡಗಳು ಕಲಾ ಪ್ರದರ್ಶನ ನೀಡುತ್ತಾ ಸಾಗಿದವು. ವಿಶೇಷವಾಗಿ ಗಾರುಡಿ ಗೊಂಬೆಗಳ ಉದ್ದನೆಯ ಪ್ರತಿರೂಪಗಳು ಮಕ್ಕಳ ಗಮನ ಸೆಳೆದವು. ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ದೇವರ ಉತ್ಸವದ ಮೆರವಣಿಗೆ, ಈ ಮೆರವಣಿಗೆಯಲ್ಲಿ ತುಮಕೂರು ತಾಲೂಕು ಕಚೇರಿಯ ಗಣಪತಿ, ಮಂಡಿಪೇಟೆಯ ಶ್ರೀ ಭದ್ರಕಾಳಿ ಹಾಗೂ ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಚಿಕ್ಕಪೇಟೆಯ ಶ್ರೀ ಕೋಟಿ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರೀಸ್ವಾಮಿ, ವಿಶ್ವಕರ್ಮ ಕಾಳಿಕಾಂಬ, ಬ್ರಹ್ಮಕುಮಾರಿ ಈಶ್ವರಿ, ಅಂಕಾಲಮ್ಮ ಹಾಗೂ ನಾಲ್ಕು ಗಾಳಿ ಭಾವಿ ಗಣೇಶ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಮಾರಿಯಮ್ಮ ನಗರದ ಮಾರಿಯಮ್ಮ ದೇವಿ, ಶ್ರೀ ವೀರಭದ್ರಸ್ವಾಮಿ ಸೇರಿದಂತೆ 33ಕ್ಕೂ ಹೆಚ್ಚು ಗ್ರಾಮ ದೇವತೆಗಳು ಹೂಗಳಿಂದ ಅಲಂಕರಿಸಲ್ಪಟ್ಟ ಸಾರೋಟು (ಜಿಲ್ಲಾ ರಥ)ಗಳಲ್ಲಿ ಸಾಗಿದ್ದು ಜನರಲ್ಲಿದ್ದ ಅದ್ವಿತೀಯ ಭಕ್ತಿ ಭಾವ ಮೂಡಿಸಿತು.











ಜಂಬೂ ಸವಾರಿ ಮೆರವಣಿಗೆಯು ನಗರದ ಬಿ.ಜಿ.ಎಸ್. ವೃತ್ತದಿಂದ ಚರ್ಚ್ ಸರ್ಕಲ್, ಡಿಸಿ ಕಚೇರಿ, ಅಮಾನಿಕೆರೆ ರಸ್ತೆ, ಕೂಡಿದ ಹೊತ್ತು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು. ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶಮೀಪೂಜೆ ಸಂಪನ್ನ: ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೃಹಮಂತ್ರಿ ಜಿ.ಪರಮೇಶ್ವರ ಅವರು ಕಡಂಬಿ ಛೇದನ ಮಾಡುವ ಮೂಲಕ ಶಮೀ ಪೂಜೆ ಸಂಪನ್ನಗೊಳಿಸಿದರು. ಮೆರವಣಿಗೆಯಲ್ಲಿ ರಾಜ್ಯ ಕಾಡು ಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಟಿ.ಡಿ. ಜಯಚಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಬಿಡಿಎಸಿಸಿ ಬ್ಯಾಂಕ್ ಅಧ್ಯಕ್ಷ ನಾಗೇಶ್ರಾವ್ ಎಂ., ಡಿಸಿಎಂ ಪತ್ನಿ ಕನ್ನಿಕಾ ಪರಮೇಶ್ವರಿ, ಜಿಪಂ ಸಿಇಒ ಪ್ರಭುಲಿಂಗಯ್ಯಚಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ. ಅಶೋಕ್, ಜಿಪಂ ಸಿಇಒ ಬಿ.ವಿ. ಅಶ್ವಿಜ, ಪಾಲಿಕೆ ಆಯುಕ್ತ ಶುಭ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸಮಾರೋಪ ಸಮಾರಂಭ, ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಸಂಗೀತ ರಸಸಂಜೆ ವೀಕ್ಷಕರ ಗಮನ ಸೆಳೆಯಿತು. ಒಟ್ಟಾರೆ ಕಳೆದ ಹನ್ನೊಂದು ದಿನಗಳ ಕಾಲ ನಡೆದ ತುಮಕೂರು ದಸರಾ ಅಪರೂಪದ ಧಾರ್ಮಿಕ ಸಾಂಸ್ಕೃತಿಕ ಭವ್ಯತ್ವಪೂರ್ಣ ಕಾರ್ಯಕ್ರಮದೊಂದಿಗೆ ಬುಧವಾರ ಯಶಸ್ವಿ ತೆರೆಕಂಡಿತು.
ನಗರದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದ್ದ ಜಂಬೂಸವಾರಿ ಮೆರವಣಿಗೆಯಲ್ಲಿ ಲಕ್ಷ್ಮಣ ಆನೆಗಳ ಗಾಂಭೀರ್ಯ, ಲಕ್ಷ್ಮಣನ ಧೈರ್ಯ, ಇವುಗಳ ನಡುವೆ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ನಿಜಕ್ಕೂ ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡಿನ ಸಾಲುಗಳನ್ನು ಮೆಲುಕು ಹಾಕುವಂತೆ ಮಾಡಿತು. ಮೆರವಣಿಗೆಯನ್ನು ವೀಕ್ಷಿಸಲು ದಾರಿಯುದ್ದಕ್ಕೂ ಅಲ್ಲಲ್ಲಿ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು. ಅನೇಕರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಜಂಬೂಸವಾರಿಯ ದೃಶ್ಯಗಳನ್ನು ಸೆರೆ ಹಿಡಿದು ತುಮಕೂರು ದಸರಾ ಅಮೂಲ್ಯ ನೆನಪುಗಳನ್ನು ತಮ್ಮದಾಗಿಸಿಕೊಂಡರು.
ಲಕ್ಷಾಂತರ ಜನ ದಸರಾ ವೀಕ್ಷಿಸಿದ್ದು, ತುಮಕೂರು ಜಿಲ್ಲೆ ಮಾತ್ರವಲ್ಲದೆ ನೆರೆಯ ಬೆಂಗಳೂರು, ಮಂಡ್ಯ, ಮೈಸೂರು, ಹೊರರಾಜ್ಯದಿಂದಲೂ ಜನತೆ ಆಗಮಿಸಿದ್ದು ಸಂತಸದ ಸಂಗತಿ. ತಾಯಿ ಚಾಮುಂಡೇಶ್ವರಿಯಲ್ಲಿ ಬಲದ ಸ್ಥಿತಿಯಲ್ಲಿರುವ ನಾಡಿಗೆ ಮಳೆಯಾಗಲಿ. ಶಾಂತಿ-ನೆಮ್ಮದಿ ನಾಡಿನಲ್ಲಿ ಲಭಿಸಲಿ ಎಂದು ಪ್ರಾರ್ಥಿಸಿದ್ದೇನೆ. ಹನ್ನೊಂದು ದಿನಗಳ ಕಾಲವೂ ನಡೆದ ಧಾರ್ಮಿಕ ಕಾರ್ಯಕ್ರಮ, ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ತುಮಕೂರು ಜನತೆ ದಸರಾಗೆ ನೀಡಿದ ಸಹಕಾರಕ್ಕೆ ಧನ್ಯವಾದ ಅರ್ಪಿಸುವೆ. ದಸರಾದಲ್ಲಿ ತೊಡಗಿದ ಪ್ರತಿಯೊಬ್ಬರ ಶ್ರಮ ಸಾರ್ಥಕವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
