ಕುಣಿಗಲ್: ಪಟ್ಟಣದಲ್ಲಿ ಬುಧವಾರ ನಡೆದ ಅದ್ದೂರಿ ವಿಜಯ ದಶಮಿ ಮೆರವಣಿಗೆಯ ಸಡಗರ, ಸಂಭ್ರಮ, ವೈಭವವನ್ನು ಜನರು ಕಣ್ಣುಂಬಿಕೊಂಡರು. ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಮಿಪೂಜೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಪಟ್ಟಣದ ಪ್ರಸಿದ್ಧ ದೇವರುಗಳಾದ ಶ್ರೀ ಕೊಲ್ಲಾಪುರದಮ್ಮ, ಕೋಟೆ ತುಡಿಕೆ ವೆಂಕಟರಮಣ ಸ್ವಾಮಿ, ಮಾರಮ್ಮ, ಚೌಡೇಶ್ವರಿ, ಕಾಳಿಕಾಂಬ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮ ದೇವತೆ ದೇವಾಲಯದ ಆವರಣಕ್ಕೆ ತಂದು, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ ಮೂರ್ತಿಗಳು ಮೆರವಣಿಗೆ ಮೂಲಕ ಮಲ್ಲಾಘಟ್ಟ ಬನ್ನಿ ಮಂಟಪ ತಲುಪಿದವು.
ಇಲ್ಲಿನ ಗ್ರಾಮ ದೇವತೆ ಸರ್ಕಲ್ ನಿಂದ ತೆರಳಿದ ಮೆರವಣಿಗೆಯು ಮಲ್ಲಾಘಟ್ಟದ ಬನ್ನಿ ಮಂಟಪ ಬಳಿ ಸಂಜೆಗೆ ತಲುಪಿತು. ಬನ್ನಿ ಮಂಟಪದಲ್ಲಿ ಶಮಿಪೂಜೆ ನೆರವೇರಿಸಿದ ಬಳಿಕ ತಹಶೀಲ್ದಾರ್ ಎನ್.ಆರ್. ಕರಿಯಾನಾಯ್ಕ್ ಛೇದಿಸಿದರು. ಶಾಸಕ ಡಾ. ಎಚ್. ಡಿ. ರಂಗನಾಥ್ ಸತತವಾಗಿ 4ನೇ ಬಾರಿ ವಿಜಯ ದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದರು.
“ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ದಯೆಯಿಂದ ಈ ಬಾರಿ ತಾಲೂಕು ಸೇರಿದಂತೆ ನಾದಿನಾದ್ಯಂತ ಉತ್ತಮ ಮಳೆಯಾಗಲಿ, ಹೇಮಾವತಿ ವ್ಯಾಪ್ತಿಯ ಕುಣಿಗಲ್ ದೊಡ್ಡ ಕೆರೆ, ಕೊತ್ತಗೆರೆ ಕೆರೆ ಮೊದಲಾದ ಕೆರೆಗಳು ತುಂಬಿ ಕೋಡಿ ಬೀಳಲಿ. ಮಾರ್ಕೋನಹಳ್ಳಿ ಜಲಾಶಯ ಮತ್ತಿತರರ ಕೆರೆಕಟ್ಟೆಗಳು ತುಂಬಿ, ರೈತರ ಮೊಗದಲ್ಲಿ ಸಂತಸ ಮೂಡಲಿ. ನಾಡಿನ ಸುಭಿಕ್ಷತೆಗೆ ತಾಯಿ ಚಾಮುಂಡೇಶ್ವರಿ ಕರುಣಿಸಿ ರಾಜ್ಯವು ಸಮೃದ್ಧಿಯಾಗಲಿ.”
— ಡಾ.ಎಚ್.ಡಿ.ರಂಗನಾಥ್, ಶಾಸಕರು.
ಪಟ್ಟಣದಲ್ಲಿ ಶತ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಜಯ ದಶಮಿ ಮೆರವಣಿಗೆಯಲ್ಲಿ ತಹಸೀಲ್ದಾರ್ ಎನ್.ಆರ್. ಕರಿಯಾ ನಾಯ್ಕ್ ಭಾರತೀಯ ಸಂಸ್ಥತಿಯ ಉಡುಗೆ ತೊಡುಗೆ ತೊಟ್ಟು, ಮೈಸೂರು ಪೇಟ ಧರಿಸಿ ಕುದುರೆ ಏರಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಈ ವೇಳೆ ತಾ.ಪಂ ಇಒ ವಸಂತ್ ಕುಮಾರ್, ವೃತ್ತ ನಿರೀಕ್ಷಕ ಮಾದ್ವಾನಾಯ್ಕ, ಬಿಇಒ ಮಮತಾಮಣಿ, ಟಿಎಚ್ ಒ ಮರಿಯಪ್ಪ, ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಬಿ.ಎನ್.ಅರುಣ್ಕುಮಾರ್, ಸದಸ್ಯರಾದ ಕೆ.ಆರ್ ಜಯಲಕ್ಷ್ಮಿ, ಭಾಗ್ಯಮ್ಮ, ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
