ರಾಯಚೂರು: ವ್ಯಕ್ತಿಯಲ್ಲಿ ಪದೇ ಪದೇ ಎದುರಾಗುವ ತೀವ್ರ ಸಂಕಷ್ಟಗಳು, ಅತಿಯಾದ ಮಾನಸಿಕ ಒತ್ತಡ ಹಾಗೂ ಮಿತಿಮೀರಿದ ಆಲೋಚನೆಗಳಿಂದ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿಯೇ ರೋಗಿಯ ಮನಃಸ್ಥಿತಿಯನ್ನು ಅರ್ಥೈಸಿಕೊಂಡು, ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯೊಂದಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಕಾಯಿಲೆಯನ್ನು ಬೇಗನೆ ಗುಣಪಡಿಸಬಹುದು ಈ ದಿಸೆಯಲ್ಲಿ ಸೇವೆ ಪಡೆಯಲು ಯಾರು ಹಿಂದೇಟು ಹಾಕಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಹೇಳಿದರು.
ಅಕ್ಟೋಬರ್ 22ರ ಸೋಮವಾರ ದಂದು ರಾಯಚೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಮಾನಸಿಕ ರೋಗಿಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯಕಾರಿ ಎಂಬ ತಪ್ಪು ಕಲ್ಪನೆ ಇತ್ತು. ಆದರೆ ಕಳೆದ ಮೂರು ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆದ ಅಭೂತಪೂರ್ವ ಸಂಶೋಧನೆಗಳು ಮತ್ತು ಸುಧಾರಿತ ಚಿಕಿತ್ಸಾ ಪದ್ಧತಿಗಳಿಂದಾಗಿ ರೋಗಿಗಳಿಗೆ ಮನೆಯಲ್ಲಿಯೇ ಆರೈಕೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಇಂತಹ ಸಮಸ್ಯೆಗಳಿಂದ ಹೊರಬರಬಹುದು ಎಂದರು.
ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ಶಿವಕುಮಾರ ನಾರಾ ಅವರು ಮಾತನಾಡಿ, ವಿವಿಧ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಣೆಗಾಗಿ ಅನಗತ್ಯ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಬಾರದು. ಯಾವುದೇ ಮಾನಸಿಕ ಸಮಸ್ಯೆ ಅಥವಾ ಸಂಕಷ್ಟಗಳಿದ್ದಾಗ ಮುಕ್ತವಾಗಿ ಸಹೋದ್ಯೋಗಿಗಳೊಂದಿಗೆ ಮನದಾಳದಲ್ಲಿಯ ಮಾತುಗಳನ್ನು ಹಂಚಿಕೊಂಡು ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಮನೋರೋಗ ತಜ್ಞ ಡಾ ಮನೋಹರ ಪತ್ತಾರ, ಈ ವರ್ಷದ ಘೋಷ ವಾಕ್ಯವಾದ “ಅನುಭವದ ಧ್ವನಿ ಬದಲಾವಣೆಯ ಶಕ್ತಿ” ಎಂಬ ಹಿನ್ನಲೆಯಡಿ ಮಾತನಾಡುತ್ತಾ, ಸಾಮಾನ್ಯವಾಗಿ 15 ರಿಂದ 25 ವರ್ಷದ ಯುವ ಜನತೆಯಲ್ಲಿ ಗ್ರಾಮೀಣ-ನಗರ ಅಥವಾ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಉಚಿತ ಆಪ್ತ ಸಮಾಲೋಚನೆ ಮತ್ತು ಔಷಧೋಪಚಾರಗಳು ಲಭ್ಯವಿವೆ ಎಂದರು.
ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಟೆಲಿ-ಮನಸ್ ಉಚಿತ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ತಿಳಿಸಿದರು. ಅಲ್ಲದೆ ಮಾನಸಿಕ ಸಮಸ್ಯೆಯು ವ್ಯಕ್ತಿಯ ಆಲೋಚನೆ, ಭಾವನೆ ಹಾಗೂ ಗ್ರಹಿಕೆಯನ್ನು ಬಾಧಿಸುತ್ತದೆ. ಕಾರಣವಿಲ್ಲದೆ ಅತಿಯಾದ ಕೋಪ, ದುಃಖ, ಅತಿಯಾದ ನಗು ಅಥವಾ ಅಳು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಲಕ್ಷಣಗಳು ಕಂಡ ಕೆಲವೇ ವಾರಗಳಲ್ಲಿ ಮಾತ್ರೆ ಅಥವಾ ಚುಚ್ಚುಮದ್ದಿನ ಚಿಕಿತ್ಸೆ ಆರಂಭಿಸಿದರೆ ಕಾಯಿಲೆಯನ್ನು ಶೀಘ್ರವೇ ನಿಯಂತ್ರಿಸಬಹುದು. ಪ್ರಸ್ತುತ “ಮನೋಚೈತನ್ಯ” ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಮಾನಸಿಕ ಆರೋಗ್ಯ ರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಮರೇಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್ ಹೆಚ್, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸೈಕಾಲಜಿಸ್ಟ್ ಅರುಣ್ ಕುಮಾರ್, ಪಿಎಸ್ಡಬ್ಲ್ಯು ದೀಪಾ ಎಸ್ ಎಲ್, ಪಿಎಸ್ ಎನ್ ಗಂಗಮ್ಮ, ಪಿಎಸ್ ಡಬ್ಲ್ಯು ಮಂಜುಳಾ ಸೇರಿದಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
