ತಿಪಟೂರು: ತಿಪಟೂರು ತಾಲೂಕಿನ ಬುರುಡೆಘಟ್ಟ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಸ್. ಉಮಾಶಂಕರ್ ಅವರು ತಮ್ಮ ನೂರಾರು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿದ ಬಿ.ಎಸ್. ಉಮಾಶಂಕರ್, “ಸುಮಾರು 20 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ. ಆ ಪಕ್ಷದ ಋಣ ನನ್ನ ಮೇಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಅವರ ಕಾರ್ಯ ವೈಖರಿ, ಕಾರ್ಯಕರ್ತರನ್ನು ಗುರುತಿಸುವ ರೀತಿ ಹಾಗೂ ಅವರ ಹೃದಯವಂತಿಕೆಗೆ ಮನಸೋತು ನಾನು ಜೆಡಿಎಸ್ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ನನ್ನನ್ನು ಗುರುತಿಸುವುದು ಜೆಡಿಎಸ್ ಪಕ್ಷಕ್ಕೆ ಬಿಟ್ಟಿದ್ದು,” ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷ ತೊರೆಯಲು ಪ್ರಮುಖ ಕಾರಣವನ್ನು ತಿಳಿಸಿದ ಅವರು, “ರಾಜ್ಯದ ಮುಖ್ಯಮಂತ್ರಿಗಳು ವೀರಶೈವ ಲಿಂಗಾಯತ ಮಠಾಧೀಶರಿಗೆ ಅಪ್ಪಣೆ ಕೊಡುವ ರೀತಿಯಲ್ಲಿ ಮಾತನಾಡುವ ಮೂಲಕ ಇಡೀ ವೀರಶೈವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಈ ನಡವಳಿಕೆಯಿಂದ ತೀವ್ರ ಬೇಸತ್ತು ಕಾಂಗ್ರೆಸ್ ತ್ಯಜಿಸುತ್ತಿದ್ದೇನೆ” ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಅವರು ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜ ನೀಡಿ ಉಮಾಶಂಕರ್ ಹಾಗೂ ಅವರ ಬೆಂಬಲಿಗರನ್ನು ಜೆಡಿಎಸ್ ಪಕ್ಷಕ್ಕೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ಗೊರಗನಹಳ್ಳಿ ಸುದರ್ಶನ್, ರಾಜಶೇಖರ್, ಎಂ.ಎಸ್. ಶಿವಸ್ವಾಮಿ, ಪುಟ್ಟರಾಜು, ಆನಂದ್, ಸಂತೋಷ್, ಷಡಕ್ಷರಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
