ಕೊರಟಗೆರೆ : ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ಧರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಅನ್ನ ದಾಸೋಹ ಉಗ್ರಾಣದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿದ್ದ ಅಕ್ಕಿಯನ್ನು ತಹಶೀಲ್ದಾರ್ ಶರತ್ ಕುಮಾರ್ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ರಂಗರಾಜು ಸಮ್ಮುಖದಲ್ಲಿ ಬಹಿರಂಗವಾಗಿ ಹರಾಜು ಮಾಡಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಸುಮಾರು 11 ಮಂದಿ ಭಾಗವಹಿಸಿದ್ದು, ಪ್ರತಿಯೊಬ್ಬರು ₹20 ಸಾವಿರ ಮುಂಗಡ ಠೇವಣಿ ಪಾವತಿಸಿ ನಿಯಮಾನುಸಾರ ಹರಾಜಿನಲ್ಲಿ ಪಾಲ್ಗೊಂಡರು. ಪ್ರತಿ ಒಂದು ಕೆ.ಜಿ. ಅಕ್ಕಿಗೆ ₹29ರಂತೆ ಬಿಡ್ ಕೂಗುವ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಹರಾಜು ಪ್ರಕ್ರಿಯೆಯ ಬಳಿಕ ತಹಶೀಲ್ದಾರ್ ಶರತ್ ಕುಮಾರ್ ಅವರು ದೇವಾಲಯದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಹನ ನಿಲುಗಡೆ ಸ್ಥಳ ಹಾಗೂ ಅನ್ನ ದಾಸೋಹ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶಿಥಿಲಾವಸ್ಥೆಯಲ್ಲಿರುವ ಚೌಲೋಪನಯನ ಮಂಟಪವನ್ನು ಗಮನಿಸಿ, ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಮುಜರಾಯಿ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ಶರತ್ ಕುಮಾರ್, ಸಿದ್ದರಬೆಟ್ಟ ಕ್ಷೇತ್ರಕ್ಕೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಮಾನ್ಯ ಉಪ ಮುಖ್ಯಮಂತ್ರಿಹೇಳು
ಗಳಾದ ಡಾ ಜಿ ಪರಮೇಶ್ವರ್ ಮತ್ತು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಗಮನಕ್ಕೆ ತಂದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೊಂದಿಹಳ್ಳಿ ರಂಗರಾಜು ಮಾತನಾಡಿ, ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ ನಡೆಸಲಾಗಿದೆ. ಈ ಬಾರಿ ಶ್ರೀ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವವನ್ನು ವಿಶೇಷವಾಗಿ ಹಾಗೂ ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಅದಕ್ಕೂ ಮುನ್ನ ಕ್ಷೇತ್ರಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ತಹಶೀಲ್ದಾರ್ ಶರತ್ ಕುಮಾರ್ ಅವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯ ಮುಖಂಡರಾದ ವಿಭೂತಿ ಸಿದ್ದಪ್ಪ ಮಾತನಾಡಿ, ಸಿದ್ದರಬೆಟ್ಟ ಕ್ಷೇತ್ರಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಕುಡಿಯುವ ನೀರು, ಶೌಚಾಲಯ ಮತ್ತು ವಾಹನ ನಿಲುಗಡೆ ಸೇರಿದಂತೆ ಕೆಲವು ಮೂಲ ಸೌಕರ್ಯಗಳ ಅಗತ್ಯವಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ಸಮಸ್ಯೆಗಳನ್ನು ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ ಐ ಪ್ರತಾಪ್, ಕಂದಾಯ ಇಲಾಖೆ ಸಿಬ್ಬಂದಿಗಳಾದ ನಾಗಶ್ರೀ, ನಿಂಗೇಶ್, ಮುಜರಾಯಿ ಇಲಾಖೆ ಸಿಬ್ಬಂದಿಗಳಾದ ಸೌಭಾಗ್ಯಮ್ಮ, ಸತ್ಯನಾರಾಯಣ ಮತ್ತು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಕಾಶ್ ಸೇರಿದಂತೆ ಸ್ಥಳೀಯ ಮುಖಂಡರಾದ ಮಲ್ಲಪ್ಪ, ಪಾಂಡುರಂಗಯ್ಯ, ಪುಟ್ಟರಾಜು, ಸಿದ್ದೇಶ್, ಮಂಜುನಾಥ್, ಪ್ರದೀಪ್ ಇನ್ನಿತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
