ತಿಪಟೂರು: ನಗರದ ಸ್ಥಳೀಯ ದೊಡ್ಮನೆ ಅಭಿಮಾನಿ ಬಳಗದ ವತಿಯಿಂದ ಕನ್ನಡದ ಹೆಮ್ಮೆಯ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಐದನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಲ್ಲಿನ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಕಿರುತೆರೆ ನಟ ದಯಾನಂದ್ ಸಾಗರ್ ಅವರು, ಇಂದಿನ ದಿನಮಾನಗಳಲ್ಲಿ ಹಲವು ಸಂಘ-ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗದೆ ಅಳಿವಿನಂಚಿನಲ್ಲಿರುವ ಸಂದರ್ಭದಲ್ಲಿ, ದೊಡ್ಮನೆ ಅಭಿಮಾನಿ ಬಳಗವು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಿಪಟೂರು ಹಾಗೂ ವರನಟ ಡಾ. ರಾಜ್‌ಕುಮಾರ್ ಅವರ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ತಿಪಟೂರಿನ ರಾಮಸ್ವಾಮಿ ಮತ್ತು ಡಾ. ರಾಜ್‌ಕುಮಾರ್ ಅವರ ನಡುವಿನ ಆತ್ಮೀಯ ಗೆಳೆತನ ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದು ಸ್ಮರಿಸಿದರು.
ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸರಳತೆ, ಮಾನವೀಯತೆ ಹಾಗೂ ಸಮಾಜಸೇವೆಯ ಮೂಲಕ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸುವುದು ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಸಂದೇಶ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನದಾನ, ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆ, ರಕ್ತದಾನ ಶಿಬಿರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದು ಜನಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪರಶಿವಮೂರ್ತಿ, ಹಿರಿಯ ಪತ್ರಕರ್ತ ಹಾಗೂ ನಟ ತಿಪಟೂರಿನ ದಯಾನಂದ್ ಸಾಗರ್ ಸೇರಿದಂತೆ ದೊಡ್ಮನೆ ಅಭಿಮಾನಿ ಬಳಗದ ನೂರಾರು ಸದಸ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ದರ್ಶನ್ ಕೆ.ಎಸ್., ಖಜಾಂಚಿ ಪ್ರಕಾಶ್ ಎ., ನಿರ್ದೇಶಕರಾದ ರಾಮಚಂದ್ರ, ಪ್ರಶಾಂತ್, ಕೇಶವಮೂರ್ತಿ, ನರಸಿಂಹಮೂರ್ತಿ, ವೇದಮೂರ್ತಿ, ಚೌಡಪ್ಪ, ವಾಸು, ಮನು, ಅಜಯ್, ರಘು, ಚಂದನ್, ಸೋಮಣ್ಣ, ರಾಜು, ಮಹೇಶ್, ಕಾರ್ತಿಕ್, ನಂಜುಂಡಸ್ವಾಮಿ, ಶಂಕರ್, ಹೇಮಂತ್, ಮಂಜುನಾಥ್, ಪಾರ್ಥ, ರಮೇಶ್, ಡಿಜೆ ದಿಲೀಪ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸಿದರು.
ಅಭಿಮಾನ ಎನ್ನುವುದು ಕೇವಲ ಆರಾಧನೆಗೆ ಸೀಮಿತವಾಗದೆ, ಸಮಾಜಸೇವೆಯ ಮೂಲಕವೂ ವ್ಯಕ್ತವಾಗಬಹುದು ಎಂಬುದಕ್ಕೆ ತಿಪಟೂರಿನ ದೊಡ್ಮನೆ ಅಭಿಮಾನಿ ಬಳಗದ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ವರದಿ: ಆನಂದ, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
