ಬೆಂಗಳೂರು: ನಟ ಧನ್ವೀರ್ ಗೌಡ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ವೈಮನಸ್ಸು ಇದೀಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಜೈಲಿನಲ್ಲಿದ್ದುಕೊಂಡೇ ನಟ ದರ್ಶನ್ ತೂಗುದೀಪ ಅವರು ಧನ್ವೀರ್ ವಿರುದ್ಧ ಕಾನೂನಾತ್ಮಕ ‘ಕ್ರಮ’ ಕೈಗೊಂಡಿದ್ದಾರೆ.
ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಅಥವಾ ಬಹಿರಂಗ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ದರ್ಶನ್ ಪರ ವಕೀಲರು ಬೆಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್ ಹಾಗೂ ಅವರ ಕುಟುಂಬದ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಧನ್ವೀರ್ ಗೌಡಗೆ ತಡೆಹಿಡಿಯುವ (Injunction) ಸ್ಪಷ್ಟ ಆದೇಶ ಹೊರಡಿಸಿದೆ.
ಮಾಹಿತಿಗಳ ಪ್ರಕಾರ, ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ನಡೆದಿರುವ ಸುಮಾರು ₹10 ಕೋಟಿ ರೂಪಾಯಿ ಹಣಕಾಸಿನ ವ್ಯವಹಾರವೇ ಈ ಮುನಿಸಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ವಿಜಯಲಕ್ಷ್ಮಿ ಅವರ ಕುರಿತು ಮಾತನಾಡುವಾಗ ಧನ್ವೀರ್ “ಫೇಕ್” ಎಂದು ಕರೆದಿದ್ದಲ್ಲದೆ, ಸಾಲು ಸಾಲು ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳಿಂದ ಆಕ್ರೋಶಗೊಂಡ ದರ್ಶನ್, ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರದಂತೆ ತಡೆಯಲು ಈ ಕಾನೂನು ಹಾದಿ ತುಳಿದಿದ್ದಾರೆ.
ಮೂರು ಠಾಣೆಗಳಲ್ಲಿ ದೂರು, ಎರಡು ಎಫ್ ಐಆರ್ ದಾಖಲು
ವಿಜಯಲಕ್ಷ್ಮಿ ಅವರ ಬೆಂಬಲಿಗರು ಹಾಗೂ ಮ್ಯಾನೇಜರ್ ಈಗಾಗಲೇ ಧನ್ವೀರ್ ವಿರುದ್ಧ ಆರ್ಆರ್ ನಗರ, ಬಸವೇಶ್ವರ ನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಆರ್ಆರ್ ನಗರ ಹಾಗೂ ಬಸವೇಶ್ವರ ನಗರ ಠಾಣೆಗಳಲ್ಲಿ ಧನ್ವೀರ್ ವಿರುದ್ಧ ಎರಡು ಎಫ್ಐಆರ್ಗಳು (FIR) ದಾಖಲಾಗಿವೆ.
ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಕಾನೂನು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋರ್ಟ್ ನೀಡಿರುವ ಈ ಮಧ್ಯಂತರ ತಡೆ ಆದೇಶವು ಚಿತ್ರರಂಗದಲ್ಲಿ ಮಹತ್ವದ ಚರ್ಚೆಗೆ ಗ್ರಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
