ಮಂಡ್ಯ: ಕಾಲೇಜು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ದಾರಿ ದೀಪವಾಗಬೇಕಿದ್ದ ಉಪನ್ಯಾಸಕನೊಬ್ಬ, ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಗಳಿಗೆ ಅಶ್ಲೀಲ ಹಾಗೂ ಕಿರುಕುಳ ನೀಡುವಂತಹ ಮೆಸೇಜ್ ಕಳುಹಿಸಿ ರೊಚ್ಚಿಗೆದ್ದ ವಿದ್ಯಾರ್ಥಿನಿಯರಿಂದ ಸರಿಯಾಗಿ ಧರ್ಮದೇಟು ತಿಂದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ನಡೆದಿದೆ.
ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ, ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಗಳನ್ನು ಪಡೆದುಕೊಂಡು ಅವರಿಗೆ ನಿರಂತರವಾಗಿ ವಾಟ್ಸಾಪ್/ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದ. ‘ಐ ಲವ್ ಯೂ’, ‘ಐ ಲೈಕ್ ಯೂ’, ‘ಐ ಲವ್ ಯೂ ಚಿನ್ನು’ ಎಂದು ಸಂದೇಶಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.
ಉಪನ್ಯಾಸಕನ ಈ ಅಸಭ್ಯ ವರ್ತನೆಯಿಂದ ತೀವ್ರ ಬೇಸತ್ತ ಹಾಗೂ ಆಕ್ರೋಶಗೊಂಡ ವಿದ್ಯಾರ್ಥಿನಿಯರು, ಆತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ನೇರವಾಗಿ ಕಾಲೇಜಿನ ಆಫೀಸ್ ರೂಮ್ ಗೆ ನುಗ್ಗಿದ್ದಾರೆ.
ವಿದ್ಯಾರ್ಥಿನಿಯರು ನೇರವಾಗಿ ಕಚೇರಿಗೆ ತೆರಳಿ ಉಪನ್ಯಾಸಕನಿಗೆ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಈ ವೇಳೆ ತಪ್ಪು ಒಪ್ಪಿಕೊಂಡು ಉಪನ್ಯಾಸಕ ಕೈ ಮುಗಿದು ಕ್ಷಮೆ ಕೇಳಿದರೂ ಬಿಡದ ವಿದ್ಯಾರ್ಥಿನಿಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯನ್ನು ವಿದ್ಯಾರ್ಥಿನಿಯರು ಮೊಬೈಲ್ ನಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದಾಗ, ಮುಖ ಮುಚ್ಚಿಕೊಳ್ಳಲು ಉಪನ್ಯಾಸಕ ಮಾಸ್ಕ್ ಹಾಕಿಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಮತ್ತಷ್ಟು ರೊಚ್ಚಿಗೆದ್ದ ವಿದ್ಯಾರ್ಥಿನಿಯರು, “ಮಾಡುವುದನ್ನೆಲ್ಲಾ ಮಾಡಿ ಈಗ ಮಾಸ್ಕ್ ಹಾಕಿಕೊಳ್ತೀಯಾ?” ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಆಕ್ರೋಶಿತ ವಿದ್ಯಾರ್ಥಿನಿಯರ ತರಾಟೆಗೆ ಬೆದರಿದ ಉಪನ್ಯಾಸಕ, ಕೊನೆಗೆ ಆಫೀಸ್ ನಲ್ಲಿದ್ದ ಬೀರು ಸಂದಿಯಲ್ಲಿ ಅವಿತು ಕುಳಿತಿದ್ದಾನೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಧರ್ಮದೇಟು ತಿಂದಿರುವ ಉಪನ್ಯಾಸಕನ ವಿರುದ್ಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
