ಬೀದರ್: ಭಾಲ್ಕಿ ನಗರದ ಹಿರೇಮಠ ಸಂಸ್ಥಾನ ಕಾಂಪ್ಲೆಕ್ಸ್ ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ₹23.86 ಲಕ್ಷ ನಗದು ದೋಚಿದ್ದ ಪ್ರಕರಣವನ್ನು ಭಾಲ್ಕಿ ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಹಾಗೂ ರಾಜಸ್ಥಾನ ಮೂಲದ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ನಗದು ಮತ್ತು ಕಾರು ಸೇರಿದಂತೆ ಒಟ್ಟು ₹32 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2026ರ ಅಕ್ಟೋಬರ್ 25ರಂದು ಮಧ್ಯರಾತ್ರಿ ಸುಮಾರು 2:10ಕ್ಕೆ ಎಸ್ ಬಿಐ ಎಟಿಎಂ ಕೇಂದ್ರಕ್ಕೆ ಅಕ್ರಮವಾಗಿ ನುಗ್ಗಿದ್ದ ಖದೀಮರು, ಗ್ಯಾಸ್ ಕಟರ್ ಬಳಸಿ ಯಂತ್ರದ ಎಡಭಾಗವನ್ನು ಕತ್ತರಿಸಿ ಒಳಗಿದ್ದ ಹಣದೊಂದಿಗೆ ಪರಾರಿಯಾಗಿದ್ದರು. ಈ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ 4 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತನಿಖಾ ತಂಡಕ್ಕೆ, ಆರೋಪಿಗಳು ತೆಲಂಗಾಣದ ಹೈದರಾಬಾದ್ ನತ್ತ ಪರಾರಿಯಾಗಿರುವ ಸುಳಿವು ಸಿಕ್ಕಿತ್ತು.
ಅಕ್ಟೋಬರ್ 30ರಂದು ಹೈದರಾಬಾದ್ ನ ಶಾಹಿನ್ ನಗರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ, ಭಾಲ್ಕಿಯ ಎಟಿಎಂ ಕಳವು ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹರಿಯಾಣ ರಾಜ್ಯದ ನುಹ್ ಜಿಲ್ಲೆಯ ಎಂ.ಡಿ. ಶೋಹರಬ್ (40), ಫಿರೋಜ್‌ಪುರ ಜಿಲ್ಲೆಯ ಆಸಿಫ್ (25), ಮೆವಾತ್‌ನ ಅನೀಶ್ (47) ಹಾಗೂ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರಾಹುಲ್ (23) ಎಂದು ಗುರುತಿಸಲಾಗಿದೆ.
ಬಂಧಿತರಿಂದ ₹12 ಲಕ್ಷ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ₹20 ಲಕ್ಷ ಮೌಲ್ಯದ ಕ್ರೆಟಾ ಕಾರನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಕೃತ್ಯ ಎಸಗಲು ತಂದಿದ್ದ ಗ್ಯಾಸ್ ಹಾಗೂ ಆಕ್ಸಿಜನ್ ಸಿಲಿಂಡರ್ ಗಳು, ಗ್ಯಾಸ್ ಕಟರ್, ಸ್ಪ್ರೇ ಬಾಟಲಿಗಳು, ರಾಡ್ ಗಳು, ಪ್ಲೈಯರ್, ಹ್ಯಾಂಡ್ ಗ್ಲೌಸ್, ಮಾಸ್ಕ್ ಗಳು, ಬುರ್ಕಾಗಳು, 2 ಮೊಬೈಲ್ ಫೋನ್ ಗಳು ಮತ್ತು ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಇಟ್ಟುಕೊಂಡಿದ್ದ ವಿವಿಧ ರಾಜ್ಯಗಳ 11 ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದ ಕೇವಲ ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪ್ರಶಂಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
