ತುಮಕೂರು: ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿ ತುಕಡಿಗಳ ಗೌರವ ವಂದನೆ ಸ್ವೀಕರಿಸಿದರು.
71ನೇ ರಾಜ್ಯೋತ್ಸವದ ವಿಶೇಷವಾಗಿ ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ, ಕ್ರೀಡೆ ಹಾಗೂ ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತುಮಕೂರು ಜಿಲ್ಲೆಯ 71 ಮಂದಿ ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯನ್ನು ಸಂರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ನಾಡಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಯುವ ಪೀಳಿಗೆಗೆ ದಾಟಿಸುವ ಮೂಲಕ ಕನ್ನಡದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು,” ಎಂದು ಕರೆ ನೀಡಿದರು.
ವಿವಿಧ ಶಾಲೆ–ಕಾಲೇಜುಗಳ ಎನ್ ಸಿಸಿ, ಎನ್ ಎಸ್ ಎಸ್ ಹಾಗೂ ಸೇವಾದಳದ ವಿದ್ಯಾರ್ಥಿಗಳಿಂದ ಆಕರ್ಷಕ ಹಾಗೂ ಶಿಸ್ತುಬದ್ಧ ಪಥಸಂಚಲನ ನಡೆಯಿತು. ಇದರೊಂದಿಗೆ ವಿವಿಧ ಇಲಾಖೆಗಳು ರೂಪಿಸಿದ್ದ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ನಾಡು–ನುಡಿ, ದೇಶಭಕ್ತಿ ಬಿಂಬಿಸುವ ನೃತ್ಯ ಮತ್ತು ಗೀತ ಗಾಯನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
