ಬಸ್, ಕಾರು, ರೈಲು ಸೇರಿದಂತೆ ರಸ್ತೆ ಮತ್ತು ಹಳಿಗಳ ಮೇಲೆ ಸಂಚರಿಸುವ ವಾಹನಗಳಲ್ಲಿ ಇತರರಿಗೆ ಎಚ್ಚರಿಕೆ ನೀಡಲು ಹಾರ್ನ್ ಬಳಸುವುದನ್ನು ನೋಡಿದ್ದೇವೆ. ಆದರೆ ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಹಾರುವ ವಿಮಾನಗಳಲ್ಲೂ ಹಾರ್ನ್ ಇರುತ್ತದೆಯೇ ಎಂಬ ಕುತೂಹಲ ಹಲವರಲ್ಲಿರಬಹುದು. ಹೌದು, ವಿಮಾನಗಳಲ್ಲೂ ಹಾರ್ನ್ ವ್ಯವಸ್ಥೆ ಇದೆ. ಆದರೆ ಕಾರು ಅಥವಾ ಬಸ್ಗಳ ಹಾರ್ನ್ನಂತೆ ಇದನ್ನು ಬಳಸುವುದಿಲ್ಲ. ವಿಮಾನದಲ್ಲಿನ ಹಾರ್ನ್ಗೆ ವಿಶೇಷ ಉದ್ದೇಶವಿದ್ದು, ನೆಲದ ಮೇಲಿನ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇದು ನೆರವಾಗುತ್ತದೆ.
ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸುವಾಗ ಪೈಲಟ್ಗಳು ಹಾರ್ನ್ ಒತ್ತಿ ಇತರ ವಿಮಾನಗಳಿಗೆ ಎಚ್ಚರಿಕೆ ನೀಡುವುದಿಲ್ಲ. ವಿಮಾನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಅತ್ಯಾಧುನಿಕ ರೇಡಾರ್, ವಾಯು ಸಂಚಾರ ನಿಯಂತ್ರಣ ವ್ಯವಸ್ಥೆ (Air Traffic Control – ATC) ಹಾಗೂ ಟಿಸಿಎಎಸ್ (Traffic Collision Avoidance System – TCAS) ನಂತಹ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.

ಹೀಗಾಗಿ ವಿಮಾನದ ಹಾರ್ನ್ ಮುಖ್ಯವಾಗಿ ನೆಲದ ಮೇಲಿನ ಕಾರ್ಯಾಚರಣೆಗಳಿಗೆ ಸಂಬಂಧಿಸಿದೆ. ಇದನ್ನು ಸಾಮಾನ್ಯವಾಗಿ ‘ಗ್ರೌಂಡ್ ಕಾಲ್ ಹಾರ್ನ್’ ಅಥವಾ ಕ್ಲಾಕ್ಸನ್ ಎಂದು ಕರೆಯಲಾಗುತ್ತದೆ.
ವಿಮಾನದ ಹಾರ್ನ್ ಎಲ್ಲಿರುತ್ತದೆ?
ವಿಮಾನದ ಹಾರ್ನ್ ಪೈಲಟ್ ಗಳು ಕುಳಿತುಕೊಳ್ಳುವ ಕಾಕ್ ಪಿಟ್ ಒಳಗೆ ಸದ್ದು ಮಾಡುವ ವ್ಯವಸ್ಥೆಯಾಗಿರುವುದಿಲ್ಲ. ಬದಲಿಗೆ ವಿಮಾನದ ಮುಂಭಾಗದ ಚಕ್ರಗಳ ಸಮೀಪದ ಭಾಗದಲ್ಲಿ ಇದನ್ನು ಅಳವಡಿಸಲಾಗಿರುತ್ತದೆ. ಇದರ ಧ್ವನಿ ಕಾರು ಅಥವಾ ಬಸ್ ಗಳ ಹಾರ್ನ್ನಂತಿರುವುದಿಲ್ಲ. ಸೈರನ್ ಅಥವಾ ಹಳೆಯ ಸ್ಟೀಮ್ ಬೋಟ್ ಗಳ ಧ್ವನಿಯನ್ನು ಹೋಲುವ ತೀವ್ರವಾದ ಶಬ್ದವನ್ನು ಹೊರಡಿಸುತ್ತದೆ.
ಹಾರ್ನ್ ಅನ್ನು ಯಾವಾಗ ಬಳಸುತ್ತಾರೆ?
ವಿಮಾನವು ವಿಮಾನ ನಿಲ್ದಾಣದಲ್ಲಿ ನಿಂತಿರುವಾಗ ಪೈಲಟ್ ಗಳು ಅಥವಾ ಎಂಜಿನಿಯರ್ ಗಳಿಗೆ ನೆಲದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸುವ ಅಗತ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ ಕಾಕ್ ಪಿಟ್ ನಲ್ಲಿರುವ ಕಂಟ್ರೋಲ್ ಪ್ಯಾನೆಲ್ ನ GND (Ground Call) ಬಟನ್ ಒತ್ತಿದಾಗ ವಿಮಾನದ ಕೆಳಭಾಗದಲ್ಲಿರುವ ಹಾರ್ನ್ ಸದ್ದು ಮಾಡುತ್ತದೆ. ಈ ಶಬ್ದ ಕೇಳಿದ ಬಳಿಕ ಗ್ರೌಂಡ್ ಸಿಬ್ಬಂದಿ ವಿಮಾನದ ಮುಂಭಾಗದ ಚಕ್ರದ ಸಮೀಪದಲ್ಲಿರುವ ಸಂಪರ್ಕ ವ್ಯವಸ್ಥೆಗೆ ಹೆಡ್ ಫೋನ್ ಜೋಡಿಸಿ ಪೈಲಟ್ ಗಳೊಂದಿಗೆ ನೇರವಾಗಿ ಮಾತನಾಡಬಹುದು. ವಿಮಾನದ ನಿರ್ವಹಣೆ, ಪರಿಶೀಲನೆ ಮತ್ತು ಇತರ ನೆಲದ ಕಾರ್ಯಾಚರಣೆಗಳಿಗೆ ಈ ವ್ಯವಸ್ಥೆ ನೆರವಾಗುತ್ತದೆ.
ಕೆಲವು ವಿಮಾನಗಳಲ್ಲಿ ತಾಂತ್ರಿಕ ದೋಷ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ವಿಭಾಗದಲ್ಲಿ ಅಸಹಜ ಪರಿಸ್ಥಿತಿ ಉಂಟಾದಾಗ ಎಚ್ಚರಿಕೆ ನೀಡುವ ವ್ಯವಸ್ಥೆಯೂ ಇರುತ್ತದೆ. ಈ ಸಂದರ್ಭದಲ್ಲಿ ಹಾರ್ನ್ ಸ್ವಯಂಚಾಲಿತವಾಗಿ ಸದ್ದು ಮಾಡಬಹುದು ಎಂದು ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.ಹೀಗೆ ವಿಮಾನಗಳಲ್ಲಿರುವ ಹಾರ್ನ್ ಆಕಾಶದಲ್ಲಿ ಇತರ ವಿಮಾನಗಳಿಗೆ ದಾರಿ ಬಿಡಿಸುವುದಕ್ಕಲ್ಲ; ಬದಲಿಗೆ ವಿಮಾನ ನಿಲ್ದಾಣದಲ್ಲಿ ನೆಲದ ಸಿಬ್ಬಂದಿಯ ಗಮನ ಸೆಳೆಯಲು ಮತ್ತು ಸಂಪರ್ಕ ಸಾಧಿಸಲು ಬಳಸುವ ವಿಶೇಷ ವ್ಯವಸ್ಥೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
