ತಿಪಟೂರು: ತಿಪಟೂರು ರೋಟರಿ ಕ್ಲಬ್ ವತಿಯಿಂದ 18ನೇ ವಾರದ ಸಭೆಯ ಅಂಗವಾಗಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಟಿ.ಎಸ್. ನಾಗರಾಜ್ ಶೆಟ್ಟರ್, ನಿವೃತ್ತ ಪ್ರಾಂಶುಪಾಲರಾದ ಕೆ.ಎನ್. ರೇಣುಕಯ್ಯ, ತಿಪಟೂರು ತಾಲ್ಲೂಕು ದಂಡಾಧಿಕಾರಿಗಳಾದ ಮೋಹನ್ ಕುಮಾರ್, ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್, ಕಿಟ್ಟದಾಳ್ ಶಿವಸ್ವಾಮಿ, ಜಯಪ್ರಕಾಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾಗರಾಜ್ ಶೆಟ್ಟರ್, “ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ. ಕನ್ನಡ ಅಮೃತವಿದ್ದಂತೆ. ಪ್ರತಿಯೊಬ್ಬರೂ ಕನ್ನಡವನ್ನು ಪೂಜಿಸಿ, ಪ್ರೀತಿಸಿ, ಬೆಳೆಸಬೇಕು. ನಮ್ಮ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಭಾಷೆಯ ಅಭ್ಯಾಸ, ಓದು ಮತ್ತು ಮಾತನಾಡುವ ರೂಢಿಯನ್ನು ಬೆಳೆಸಬೇಕು” ಎಂದು ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಕೆ.ಎನ್. ರೇಣುಕಯ್ಯ ಅವರು ಮಾತನಾಡಿ, “ಮೊದಲು ಕನ್ನಡ ಭಾಷೆಯನ್ನು ಕಲಿಯಿರಿ, ನಂತರ ನಿಮಗೆ ಇಷ್ಟವಾದ ಇತರ ಭಾಷೆಗಳನ್ನು ಕಲಿಯಿರಿ. ಕನ್ನಡ ಭಾಷೆಯ ಜ್ಞಾನವಿದ್ದರೆ ಇತರ ಭಾಷೆಗಳನ್ನು ಕಲಿಯಲು ಸಹ ಅನುಕೂಲವಾಗುತ್ತದೆ” ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರು ಮಾತನಾಡಿ, “ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು. ಅರ್ಜಿಗಳು, ಪತ್ರ ವ್ಯವಹಾರಗಳು ಹಾಗೂ ಸಾರ್ವಜನಿಕ ಸಂಪರ್ಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ 55ಕ್ಕೂ ಹೆಚ್ಚು ಸದಸ್ಯರು, ಅವರ ಕುಟುಂಬದವರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
