ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೂಲಿಹಳ್ಳಿ ಗ್ರಾಮದ ಅಣ್ಣಪ್ಪ ಸ್ವಾಮಿ ಹಾಗೂ ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಅತ್ಯಂತ ಅಚ್ಚರಿಯ ಘಟನೆಯೊಂದು ಜರುಗಿದೆ. ಗರ್ಭಗುಡಿಯಿಂದ ಸುಮಾರು 17 ಅಡಿ ದೂರವಿರುವ ಮುಖ್ಯದ್ವಾರದ ಹಿಂಭಾಗದಲ್ಲಿ ಅಣ್ಣಪ್ಪ ಸ್ವಾಮಿಯ ವಿಗ್ರಹವು ಕುಳಿತಿರುವ ರೀತಿಯಲ್ಲಿ ಕಂಡುಬಂದಿದೆ ಎಂದು ಇಲ್ಲಿನ ಅರ್ಚಕರು ಹಾಗೂ ಭಕ್ತರು ಹೇಳಿದ್ದಾರೆ.
ಭಾನುವಾರ ಸಂಜೆ 6:30ರಿಂದ ಎಂದಿನಂತೆ ಪೂಜೆ ಸಲ್ಲಿಸಲಾಗಿದ್ದು, ರಾತ್ರಿ 9:30ರ ಸುಮಾರಿಗೆ ಇಣ್ಣೆಗೆರೆಯಿಂದ ಲೋಕಪ್ಪ ಹಾಗೂ ಭಕ್ತರು ಬಂದು ಪೂಜೆ ನೆರವೇರಿಸಿದ್ದರು. ನಂತರ ರಾತ್ರಿ 10:30ರ ತನಕ ಬಾಗಿಲು ತೆಗೆದಿರಲಾಯಿತು.
ಭಾನುವಾರ ರಾತ್ರಿ ಪೂಜೆ ಮುಗಿಸಿ ಬೀಗ ಹಾಕಿ ತೆರಳಿದ್ದ ಅರ್ಚಕರು, ಸೋಮವಾರ ಬೆಳಿಗ್ಗೆ 7 ಗಂಟೆಗೆ ಪೂಜೆಗಾಗಿ ಬಂದಾಗ ದೇವಸ್ಥಾನದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ಬಾಗಿಲು ಓಪನ್ ಆಗದ ಹಿನ್ನೆಲೆಯಲ್ಲಿ ತಮ್ಮನ ಮಗ ಪ್ರೇಮಂತ್ ಅವರನ್ನು ಕರೆದು ಪರಿಶೀಲಿಸಲಾಯಿತು. ಮೊಬೈಲ್ ಕ್ಯಾಮೆರಾದಲ್ಲಿ ನೋಡಿದಾಗ ಒಳಗೆ ಸ್ವಾಮಿಯ ಕಾಲು ಹಾಗೂ ವಿಗ್ರಹವಿರುವುದು ಗೋಚರಿಸಿತು ಎಂದು ಅರ್ಚಕರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ದೇವಸ್ಥಾನಕ್ಕೆ ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಭಕ್ತರ ಕಷ್ಟಗಳನ್ನು ನಿವಾರಿಸುವ ಅಣ್ಣಪ್ಪ ಸ್ವಾಮಿಯ ಮೇಲೆ ಅಪಾರ ನಂಬಿಕೆಯಿದೆ ಎಂದು ಗ್ರಾಮಸ್ಥ ಪಾಂಡಯ್ಯ ತಿಳಿಸಿದ್ದಾರೆ.
ಈ ಅಚ್ಚರಿಯ ಘಟನೆಯ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನದ ಬಳಿ ಜಮಾಯಿಸಿ ವೀಕ್ಷಿಸುತ್ತಿದ್ದಾರೆ. ಭಕ್ತರು ಇದೊಂದು ಪವಾಡ ಎಂದು ನಂಬಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
