ಬೀದರ್: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಬೀದರ್, ಬೋಸ್ಕೋ ಬೆಂಗಳೂರು ಹಾಗೂ ಡಾನ್ ಬಾಸ್ಕೋ ಬೀದರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಾರಿಯಲ್ಲಿರುವ ‘ಪೋಷಕತ್ವ ಯೋಜನೆ’ಯ ಕುರಿತು ಬೀದರ್ ತಾಲೂಕಿನ ಚಿಲ್ಲರ್ಗಿ ವಲಯದ ಅಂಗನವಾಡಿ ಕಾರ್ಯಕರ್ತರಿಗೆ ಬಾಲಭವನದಲ್ಲಿ ಮಾಹಿತಿ ಮತ್ತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಗುವಿನ ಲಾಲನೆ–ಪಾಲನೆ, ರಕ್ಷಣೆ ಹಾಗೂ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಬಂಧಿತ ಸಂಸ್ಥೆಗಳ ನಿರ್ದೇಶನದಂತೆ ಈ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾನ್ ಬಾಸ್ಕೋ ಪೋಷಕತ್ವ ಯೋಜನೆಯ ಸಂಯೋಜಕರಾದ ರಮೇಶ್ ಅವರು, ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಜೈವಿಕ ಕುಟುಂಬವಲ್ಲದ ಬೇರೊಂದು ಸೂಕ್ತ ಕುಟುಂಬಕ್ಕೆ ಗರಿಷ್ಠ 2 ವರ್ಷಗಳವರೆಗೆ ತಾತ್ಕಾಲಿಕವಾಗಿ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಡುವುದೇ ಪೋಷಕತ್ವ ಯೋಜನೆ ಎಂದು ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪಿ.ಓ. ಎನ್.ಐ.ಸಿ.2 ಅರ್ಚನ ಜೋಶ್ ಅವರು ದತ್ತು ಸ್ವೀಕಾರ ಮತ್ತು ಪೋಷಕತ್ವ ಯೋಜನೆಗಳ ಕುರಿತು ಮಾಹಿತಿ ನೀಡಿ, “ಕಾನೂನಾತ್ಮಕವಾಗಿ ಅನಾಥರಾದ, ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದ ವಾತಾವರಣದಲ್ಲಿ ಪ್ರೀತಿ, ಕಾಳಜಿ ಮತ್ತು ರಕ್ಷಣೆ ಸಿಗುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ” ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಡಾನ್ ಬಾಸ್ಕೋ ಬೀದರ್ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಲಾರೆನ್ಸ್, ಅಂಗನವಾಡಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಅರುಣ ಹಾಗೂ ಚಿಲ್ಲರ್ಗಿ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
