ತಿಪಟೂರು: ನಟ ದರ್ಶನ್ ಎದುರಿಸುತ್ತಿರುವ ಕಾನೂನು ಸಂಕಷ್ಟಗಳು ಶೀಘ್ರವಾಗಿ ನಿವಾರಣೆಯಾಗಿ ಅವರು ಮನೆಗೆ ಮರಳಲಿ ಎಂದು ಪ್ರಾರ್ಥಿಸಿ, ಅವರ ಪತ್ನಿ ವಿಜಯಲಕ್ಷ್ಮಿ ಅವರು ತಿಪಟೂರು ತಾಲೂಕಿನ ಚೌಲಿಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಕರೆಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಅಳಿಯ ಚಂದನ್ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ವಿಜಯಲಕ್ಷ್ಮಿ ಅವರು, ಪತಿ ದರ್ಶನ್ ಅವರ ಹೆಸರಿನಲ್ಲಿ ಸಂಕಲ್ಪ ಮಾಡಿಸಿ ವಿಶೇಷ ಹೋಮ-ಹವನ, ಅಭಿಷೇಕ, ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಪತಿಗೆ ಎದುರಾಗಿರುವ ಕಾನೂನು ಸಂಕಷ್ಟಗಳು ಪರಿಹಾರವಾಗಿ ಶೀಘ್ರದಲ್ಲೇ ಮನೆಗೆ ಮರಳುವಂತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.
ವಿಜಯಲಕ್ಷ್ಮಿ ಅವರು ದೇವಾಲಯಕ್ಕೆ ಆಗಮಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ದರ್ಶನ್ ಅಭಿಮಾನಿಗಳು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ವಿಜಯಲಕ್ಷ್ಮಿ ಅವರು ಯಾವುದೇ ಆಡಂಬರವಿಲ್ಲದೆ ಮೌನವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಪ್ರಸಾದ ಸ್ವೀಕರಿಸಿ ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಉಮೇಶ್ ಗೌಡ ಮಾತನಾಡಿ, “ನಮ್ಮ ನೆಚ್ಚಿನ ನಟ ದರ್ಶನ್ ಅವರು ಎದುರಿಸುತ್ತಿರುವ ಸಂಕಷ್ಟಗಳು ಶೀಘ್ರವಾಗಿ ನಿವಾರಣೆಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ. ವಿಜಯಲಕ್ಷ್ಮಿ ಅವರು ಕರೆಕಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ಸಲ್ಲಿಸಿರುವ ಪ್ರಾರ್ಥನೆ ಫಲಿಸಲಿ. ಕಾನೂನು ಹೋರಾಟದಲ್ಲಿ ನ್ಯಾಯ ದೊರೆತು ಅವರು ಶೀಘ್ರದಲ್ಲೇ ಮನೆಗೆ ಮರಳಲಿ ಎಂಬ ಆಶಯ ನಮ್ಮದು,” ಎಂದು ತಿಳಿಸಿದರು.
ಒಟ್ಟಿನಲ್ಲಿ, ದರ್ಶನ್ ಅವರ ಕಾನೂನು ಹೋರಾಟದ ನಡುವೆ ಕುಟುಂಬಸ್ಥರು ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
