ಕೊರಟಗೆರೆ: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳನ್ನು ಖಂಡಿಸಿ ಕೊರಟಗೆರೆ ತಾಲ್ಲೂಕು ವಕೀಲರ ಸಂಘದ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಯಿತು.
ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆಯ ಭಾಗವಾಗಿ, ಕೊರಟಗೆರೆಯ ಜೆಎಂಎಫ್ಸಿ ನ್ಯಾಯಾಲಯದ ಆವರಣದಿಂದ ತಾಲ್ಲೂಕು ಕಚೇರಿವರೆಗೆ ವಕೀಲರು ಬ್ಯಾನರ್ ಹಿಡಿದು ಜಾಥಾ ನಡೆಸಿದರು.
ಬಳಿಕ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ವಕೀಲರ ಒಗ್ಗಟ್ಟು ಪ್ರದರ್ಶಿಸಿದರು. ನಂತರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗೌರಿಬಿದನೂರಿನ ಹಿರಿಯ ವಕೀಲ ವೆಂಕಟರಮಣ ಸಣ್ಣಕ್ಕಿ ಅವರ ಮೇಲಿನ ಕೊಲೆ ಯತ್ನ ಹಾಗೂ ಬೆಂಗಳೂರಿನ ವೈಟ್ ಫೀಲ್ಡ್ ನ ವಕೀಲ ಮಂಜುನಾಥ್ ಶ್ರೀರಾಮ್ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದ ವಕೀಲರ ಹತ್ಯೆ ಪ್ರಕರಣಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ಸಂತೋಷ್ ಮಾತನಾಡಿ, ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ. ವಕೀಲರ ಮೇಲಿನ ಹಲ್ಲೆ ನ್ಯಾಯ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಸರ್ಕಾರ ಕೂಡಲೇ ವಕೀಲರ ಸುರಕ್ಷತಾ ಕಾಯ್ದೆಯನ್ನು ಬಲಪಡಿಸಿ, ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ವಕೀಲ ಟಿ. ಕೃಷ್ಣಮೂರ್ತಿ ಮಾತನಾಡಿ, ವಕೀಲ ವೃತ್ತಿ ಸಮಾಜದ ನ್ಯಾಯದ ಕಣ್ಣು ಇದ್ದಂತೆ. ವಕೀಲರನ್ನು ಬೆದರಿಸುವುದು, ಹಲ್ಲೆ ನಡೆಸುವುದರಿಂದ ನ್ಯಾಯದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಗೌರಿಬಿದನೂರು ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳು ಇಡೀ ವಕೀಲ ಸಮುದಾಯವನ್ನು ಆತಂಕಕ್ಕೀಡು ಮಾಡಿವೆ. ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಲ್. ನಾಗರಾಜು ಮಾತನಾಡಿ, ವಕೀಲರ ಮೇಲಿನ ದಾಳಿಯನ್ನು ಕೇವಲ ವ್ಯಕ್ತಿಯ ಮೇಲಿನ ದಾಳಿ ಎಂದು ಪರಿಗಣಿಸಬಾರದು. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳ ಮೇಲಿನ ದಾಳಿಯಾಗಿದೆ. ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ವಕೀಲರನ್ನು ಗುರಿಯಾಗಿಸುವುದು ಸರಿಯಲ್ಲ. ಸರ್ಕಾರ ವಕೀಲರ ರಕ್ಷಣಾ ಕಾಯ್ದೆಗೆ ಅಗತ್ಯ ಬಲ ತುಂಬಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ನ್ಯಾಯಾಲಯದ ಕಲಾಪ ಬಹಿಷ್ಕಾರ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
* ವಕೀಲರ ಸುರಕ್ಷತಾ ಕಾಯ್ದೆಯನ್ನು ತಿದ್ದುಪಡಿ ಮೂಲಕ ಬಲಪಡಿಸಬೇಕು.
* ವಕೀಲರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
* ನ್ಯಾಯಾಲಯದ ಆವರಣ ಸೇರಿದಂತೆ ವಕೀಲರಿಗೆ ಅಗತ್ಯ ಭದ್ರತೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಎನ್. ಹನುಮಂತರಾಜು, ಕಾರ್ಯದರ್ಶಿ ಎಂ.ಎಚ್. ಮಂಜುನಾಥ್, ಜಂಟಿ ಕಾರ್ಯದರ್ಶಿ ಡಿ.ಕೆ. ಕೃಷ್ಣ, ಡಿ.ಜಿ. ತಿಮ್ಮರಾಜು, ಜಿ.ಎಂ. ಕೃಷ್ಣಮೂರ್ತಿ, ಮಧುಸೂಧನ್, ಕೆ.ಜೆ. ನಾಗರಾಜ್, ಸಂತೋಷ್ ಲಕ್ಷ್ಮಿ, ಶಿಲ್ಪಾ, ಕೆಂಪರಾಜು, ಮಂಜುಳ, ಮನು, ಕೃಷ್ಣಮೂರ್ತಿ, ನಾಗೇಂದ್ರಪ್ಪ, ಅನಿಲ್, ಮಲ್ಲಿಕಾರ್ಜುನಯ್ಯ, ಪುಟ್ಟರಾಜು, ಹರೀಶ್, ಶಿವರಾಮಯ್ಯ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
