ಚಿಕ್ಕಮಗಳೂರು: ಕಾಫಿನಾಡಿನ ಶಕ್ತಿದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಬಿಂಡಿಗ ದೇವೀರಮ್ಮನ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವರ್ಷಕ್ಕೊಮ್ಮೆ ಮಾತ್ರ ಬೆಟ್ಟದ ತುದಿಯಲ್ಲಿ ದರ್ಶನ ನೀಡುವ ದೇವೀರಮ್ಮನ ಕಣ್ತುಂಬಿಕೊಳ್ಳಲು ಈ ಬಾರಿಯೂ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈ ಬಾರಿ ಬೆಟ್ಟ ಹತ್ತಲು ನಿರ್ದಿಷ್ಟ ಸಮಯ ಮತ್ತು ವಯೋಮಿತಿಯನ್ನು ನಿಗದಿಪಡಿಸಿದೆ.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಿಂಡಿಗ ಮಲ್ಲೇನಹಳ್ಳಿ ಗ್ರಾಮದ ದೇವೀರಮ್ಮನ ಬೆಟ್ಟದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಸುಮಾರು 3,800 ಅಡಿ ಎತ್ತರದಲ್ಲಿರುವ ಬೆಟ್ಟವನ್ನು ಕಿರಿದಾದ ಮತ್ತು ದುರ್ಗಮ ಹಾದಿಯಲ್ಲಿ ಏರಿ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಈ ವಿಶೇಷ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ಈ ಬಾರಿ ನವೆಂಬರ್ 7 ಮತ್ತು 8ರಂದು ಎರಡು ದಿನಗಳ ಕಾಲ ಮಾತ್ರ ಭಕ್ತರಿಗೆ ಬೆಟ್ಟ ಹತ್ತಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ನಿಗದಿತ ಸಮಯದೊಳಗೆ ಬೆಟ್ಟ ಹತ್ತಿ ದರ್ಶನ ಪಡೆಯಬೇಕಿದ್ದು, ರಾತ್ರಿ ವೇಳೆ ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ನವೆಂಬರ್ 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾಗೂ ನವೆಂಬರ್ 8ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಬೆಟ್ಟ ಹತ್ತಲು ಅವಕಾಶವಿರುತ್ತದೆ.
ಬೆಟ್ಟದ ಹಾದಿ ದುರ್ಗಮವಾಗಿರುವ ಹಿನ್ನೆಲೆಯಲ್ಲಿ 15 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷದೊಳಗಿನವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ವಯೋಮಿತಿ ಮತ್ತು ಸಮಯದ ನಿರ್ಬಂಧಗಳನ್ನು ಭಕ್ತರು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಬೆಟ್ಟದ ಹಾದಿಯಲ್ಲಿ ಜನಸಂದಣಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜಾತ್ರೆಯ ಸಂದರ್ಭದಲ್ಲಿ ಭಕ್ತರ ಸುರಕ್ಷತೆಗಾಗಿ ಸಾವಿರಾರು ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್‌ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ತುರ್ತು ಸಂದರ್ಭಗಳನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ.ಜಾತ್ರೆಯ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ದೇವೀರಮ್ಮನ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಾಲಯದ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಒಟ್ಟಿನಲ್ಲಿ, ದೇವೀರಮ್ಮನ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿರುವ ಭಕ್ತರು ನಿಗದಿತ ದಿನ, ಸಮಯ ಹಾಗೂ ವಯೋಮಿತಿಯ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
