ತುಮಕೂರು: ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ದಾಖಲೆ ಸಲ್ಲಿಕೆ ಮತ್ತು ತಪಾಸಣೆ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಹೊರಡಿಸಿರುವ ಜ್ಞಾಪನಾ ಪತ್ರ ಹಾಗೂ ಸುತ್ತೋಲೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ, ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅವರ ಮೂಲಕ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅಕ್ಟೋಬರ್ 27ರಂದು ಜ್ಞಾಪನಾ ಪತ್ರ ಹಾಗೂ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಹಾಗೂ ಪತ್ರಿಕೆಗಳ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಮಟ್ಟದ ವಾರ್ತಾಧಿಕಾರಿಗಳಿಗೆ ಸೂಚಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇಲಾಖೆಯ ಈ ಆದೇಶಗಳು ಸಣ್ಣ, ಮಧ್ಯಮ ಹಾಗೂ ಪ್ರಾದೇಶಿಕ ಪತ್ರಿಕೆಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡುವುದರ ಜೊತೆಗೆ, ಅವುಗಳ ಅಸ್ತಿತ್ವ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಗೆ ಧಕ್ಕೆ ತರುವ ಆತಂಕವಿದೆ. ಪತ್ರಿಕೆಗಳ ಸಮಸ್ಯೆಗಳನ್ನು ಹಾಗೂ ಅವುಗಳ ಕಾರ್ಯ ನಿರ್ವಹಣೆಯ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಇಂತಹ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ. ಆದ್ದರಿಂದ ಕೂಡಲೇ ಜ್ಞಾಪನಾ ಪತ್ರ ಮತ್ತು ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತ್ ರಾಜ್ ಅವರ ಮೂಲಕವೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ರಾಜ್ಯ ಜಂಟಿ ಕಾರ್ಯದರ್ಶಿ ಸಿ. ರಂಗನಾಥ, ಜಿಲ್ಲಾಧ್ಯಕ್ಷ ಕರುಣಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್. ಮಂಜುನಾಥಗೌಡ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಸಂಘಟನಾ ಕಾರ್ಯದರ್ಶಿ ಸಿ.ಎನ್. ಮಹೇಶ್ಕುಮಾರ್, ಸಂಪಾದಕರಾದ ಮಾರುತಿ ಗಂಗಹನುಮಯ್ಯ, ಸಿ. ಜಯಣ್ಣ, ಇಂತಿಯಾಜ್ ಅಹ್ಮದ್, ರವಿಕುಮಾರ್, ಚಿಕ್ಕಣ್ಣ, ಸುರೇಶ್, ಸಂತೋಷ್ ಎಂ.ಕೆ., ಜೆಟ್ಟಿ ಅಗ್ರಹಾರ ನಾಗರಾಜು ಸೇರಿದಂತೆ ಹಲವು ಪತ್ರಿಕಾ ಸಂಪಾದಕರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
