ಮಧುಗಿರಿ: ಟೌನ್ ಶಿಪ್ ವಿಚಾರದಲ್ಲಿ ಕ್ಷೇತ್ರದ ಜನತೆಯಿಂದ ಟೀಕೆಗೆ ಗುರಿಯಾಗಿರುವ ಮಾಗಡಿ ಶಾಸಕ ಹಾಗೂ ಸಚಿವ ಬಾಲಕೃಷ್ಣ ಅವರು ಶಾಸಕ ಕೆ.ಎನ್. ರಾಜಣ್ಣ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿಸಿದರೆ ಮಾಗಡಿಗೆ ತೆರಳಿ ಹೋರಾಟ ನಡೆಸಬೇಕಾಗುತ್ತದೆ ಎಂದು ಪಿಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಿದ್ದಗಂಗಪ್ಪ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರ ನುಡಿ ಹಾಗೂ ಜನಪರ ಕಾಳಜಿಯ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಟೀಕಿಸುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಚಿವ ಬಾಲಕೃಷ್ಣ ಅವರು ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ತಾಕತ್ತಿದ್ದರೆ ಮಾಗಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ. ಅದೇ ರೀತಿ ನಮ್ಮ ಶಾಸಕರನ್ನೂ ಪಕ್ಷೇತರರಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಸವಾಲು ಸ್ವೀಕರಿಸುತ್ತೇವೆ ಎಂದು ತಿರುಗೇಟು ನೀಡಿದರು.
ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಅವರು ಸಾಮಾನ್ಯ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಷ್ಟೊಂದು ಜನಬೆಂಬಲ ಹೊಂದಿರುವ ನಾಯಕನ ವಿರುದ್ಧ ಮಾತನಾಡುವ ಬದಲು, ತಾಕತ್ತಿದ್ದರೆ ಅವರ ಎದುರೇ ಸ್ಪರ್ಧಿಸಿ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ತಾ.ಪಂ. ಮಾಜಿ ಅಧ್ಯಕ್ಷ ಮಹಲಿಂಗಪ್ಪ ಮಾತನಾಡಿ, ಸಚಿವ ಬಾಲಕೃಷ್ಣ ಅವರು ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕೇ ಹೊರತು ರಾಜಣ್ಣ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯಬಾರದು. ರಾಜಣ್ಣ ಅವರ ರಾಜಕೀಯ ಅನುಭವ ಮತ್ತು ಹಿರಿತನಕ್ಕೆ ಗೌರವ ನೀಡಬೇಕು. ಪಕ್ಷ ಬದಲಾವಣೆ ಹಾಗೂ ಹಿಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಆರೋಪ ಎದುರಿಸಿರುವ ಅವರು ನಮ್ಮ ಶಾಸಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದು ಟೀಕಿಸಿದರು.
ತಾ.ಪಂ. ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಬಡವರ ಬಗ್ಗೆ ಕಾಳಜಿ ಹೊಂದಿರುವ ರಾಜಣ್ಣ ಅವರ ವಿರುದ್ಧ ಅನಗತ್ಯ ಟೀಕೆ ಮಾಡಲಾಗುತ್ತಿದೆ.
ಸಚಿವರಾಗಿರುವ ಬಾಲಕೃಷ್ಣ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಮೊದಲು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ. ರಾಜಣ್ಣ ಅವರ ವಿರುದ್ಧದ ಟೀಕೆಗಳು ಇದೇ ರೀತಿ ಮುಂದುವರಿದರೆ ತುಮಕೂರು ಜಿಲ್ಲೆಯ ಜನತೆ ಮಾಗಡಿ ಕ್ಷೇತ್ರಕ್ಕೆ ತೆರಳಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
