ಬೀದರ್: “ಕಳೆದ 40-50 ವರ್ಷಗಳಿಂದ ಒಂದೇ ಪಕ್ಷವಾದ ಕಾಂಗ್ರೆಸ್ಗಾಗಿ ನಿಷ್ಠೆಯಿಂದ ದುಡಿದಿದ್ದರೂ, ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ನಿಗಮ-ಮಂಡಳಿ ನೇಮಕಾತಿಯಲ್ಲಿ ಮಾದಿಗ ಸಮಾಜಕ್ಕೆ ಹಾಗೂ ನನ್ನ ಹಿರಿತನಕ್ಕೆ ಅನ್ಯಾಯವಾಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೀದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ ಅವರು, ತಮ್ಮ ಕೆಕೆಆರ್ಟಿಸಿ (KKRTC) ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಡೆಗೆ ತೀವ್ರ ಬೇಸರ ಹೊರಹಾಕಿದರು.
“1991-92ರಲ್ಲಿ ಖಾದಿ ಭಂಡಾರದ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿ, ಸುಮಾರು 18 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದೇನೆ. ಡಾ. ಬಾಬು ಜಗಜೀವನ ರಾಮ್ ಅವರ ಹೆಸರಿನ ನಿಗಮ ಅಥವಾ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಂತಹ ಸಮಾಜಮುಖಿ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಅಥವಾ ನಿರ್ದೇಶಕ ಸ್ಥಾನ ನೀಡಿದ್ದರೆ ಸಮಾಜದ ಋಣ ತೀರಿಸಲು ಅವಕಾಶವಾಗುತ್ತಿತ್ತು. ಆದರೆ, ನನ್ನ ನಿರೀಕ್ಷೆಗೆ ವಿರುದ್ಧವಾಗಿ ಕೆಕೆಆರ್ಟಿಸಿಯಲ್ಲಿ ಕೇವಲ ಸದಸ್ಯ (ನಿರ್ದೇಶಕ) ಸ್ಥಾನ ನೀಡಿರುವುದು ತೀವ್ರ ನೋವು ತಂದಿದೆ” ಎಂದರು.
ನಿಗಮ–ಮಂಡಳಿಗಳ ನೇಮಕಾತಿಯಲ್ಲಿ ಪಕ್ಷಕ್ಕಾಗಿ ಯಾರು ಎಷ್ಟು ದುಡಿದಿದ್ದಾರೆ ಎಂಬುದನ್ನು ಸರ್ಕಾರ ಸರಿಯಾಗಿ ಪರಿಶೀಲಿಸಿಲ್ಲ. ಬೀದರ್ ಜಿಲ್ಲೆಯ ನೇಮಕಾತಿಯಲ್ಲೂ ಸಾಮಾಜಿಕ ನ್ಯಾಯ ಮತ್ತು ಸಮತೋಲನ ಕಾಯ್ದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
“ಪಕ್ಷದ ವರಿಷ್ಠರನ್ನು ಭೇಟಿಯಾಗಿ ನನ್ನ ಅಸಮಾಧಾನ ತೋಡಿಕೊಳ್ಳಲು ಬೆಂಗಳೂರಿಗೆ ತೆರಳಲು ವಿಮಾನದ ಟಿಕೆಟ್ ಕೂಡ ಕಾಯ್ದಿರಿಸಿದ್ದೇನೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮೊದಲು ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಸದ್ಯಕ್ಕೆ ನನಗೆ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿಲ್ಲ, ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ” ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್ ವಿ (KCRV) ಅಧ್ಯಕ್ಷ ಅನಿಲ ನೀಡೋದಾ, “ಚಂದ್ರಕಾಂತ ಹಿಪ್ಪಳಗಾಂವ ಅವರು ನಾಲ್ಕು ದಶಕಗಳಿಂದ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೆ ನೀಡಿರುವ ನಿರ್ದೇಶಕ ಸ್ಥಾನಕ್ಕಿಂತ ಉನ್ನತವಾದ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಪಕ್ಷ ಅವರ ಸೇವೆಯನ್ನು ಗುರುತಿಸಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜೇಶ ಯರನಳ್ಳಿ, ಅರ್ಜುನ ನಂದಗಂವಾಕರ, ಅನಿಲ ಬೆನಕನಳ್ಳಿಕರ, ನ್ಯೂಟನ್ ಮಾರ್ಕ್, ಸಂಜು ಮರ್ಕಲ್, ನಾಗೇಶ ಯರ್ನಳ್ಳಿ ಹಾಗೂ ಅನಿಲಕುಮಾರ ಮೇತ್ರೆ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
