ಕುಣಿಗಲ್ : ಬ್ರಿಟಿಷರ ತೆರಿಗೆ ಪದ್ಧತಿ, ರೈತರ ಸಮಸ್ಯೆಗಳು ಸೇರಿದಂತೆ ಸ್ವಾತಂತ್ರ್ಯ ಪೂರ್ವ ಭಾರತದ ಹಲವು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸಿದ ಮಹಾತ್ಮ ಗಾಂಧೀಜಿ, ಭಾರತೀಯ ರಾಷ್ಟ್ರೀಯ ಚಳವಳಿಯನ್ನು ಸಾಮೂಹಿಕ ಜನಾಂದೋಲನವನ್ನಾಗಿ ಪರಿವರ್ತಿಸಿದ ಮಹಾನ್ ನೇತಾರರಾಗಿದ್ದರು ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ಜಿ. ವೇದಲಕ್ಷ್ಮೀ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ವತಿಯಿಂದ ಆಯೋಜಿಸಿದ್ದ ‘ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಸ್ವಾತಂತ್ರ್ಯವೆಂಬುದು ಕೇವಲ ಅಧಿಕಾರ ಹಸ್ತಾಂತರವಲ್ಲ; ಸಾಮಾಜಿಕ ಸ್ವರಾಜ್ಯ ಮತ್ತು ಸಾಮಾನ್ಯ ಜನರ ಬದುಕಿನಲ್ಲಿ ಸಮಾನತೆ ತರುವ ಆಶಯವೂ ಆಗಿದೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಚಳವಳಿಯನ್ನಾಗಿ ರೂಪಿಸಿ, ಸಾಮಾನ್ಯ ಜನರಿಗೂ ಇತಿಹಾಸ ನಿರ್ಮಿಸುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟರು ಎಂದರು.
ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಪ್ರಮುಖ ನಾಯಕರನ್ನು ಬಂಧಿಸಿದಾಗ ವಿದ್ಯಾರ್ಥಿಗಳೇ ಹೋರಾಟದ ನಾಯಕತ್ವ ವಹಿಸಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಟಿ.ಎನ್. ನರಸಿಂಹಮೂರ್ತಿ ಮಾತನಾಡಿ, ಚರಕ, ಉಪ್ಪಿನ ಸತ್ಯಾಗ್ರಹ ಮತ್ತು ಸ್ವರಾಜ್ಯದ ಪರಿಕಲ್ಪನೆಗಳ ಮೂಲಕ ಗಾಂಧೀಜಿ ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಬದುಕಿನ ಭಾಗವಾಗಿಸಿದರು. ಇಂದಿನ ಯುವಜನತೆ ಇತಿಹಾಸವನ್ನು ಅರಿತು ಅಧ್ಯಯನಶೀಲರಾಗಬೇಕು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಟಿ. ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರ ಅವಿರತ ಪರಿಶ್ರಮ, ಸಂಘಟನಾ ಶಕ್ತಿ ಹಾಗೂ ದೇಶದಾದ್ಯಂತ ಸಂಚರಿಸಿ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗೂಡಿಸಿದ ಕಾರ್ಯವನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಾಂಜನಪ್ಪ ಮಾತನಾಡಿ, ಗಾಂಧೀಜಿಯವರು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದವರು. ಅವರ ಸರಳ ವ್ಯಕ್ತಿತ್ವ, ಜನರ ನೋವಿಗೆ ಸ್ಪಂದಿಸುವ ಗುಣ ಹಾಗೂ ಜೀವನಾದರ್ಶಗಳನ್ನು ಇಂದಿನ ಯುವಜನತೆ ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ಅಧ್ಯಾಪಕರಾದ ಡಾ. ಎಂ.ಕೆ. ಮಂಜುಳಾ, ವ್ಯವಸ್ಥಾಪಕ ಚಲುವಮೂರ್ತಿ ಮಾತನಾಡಿದರು. ಡಾ. ಎನ್.ಟಿ. ಶ್ರೀನಿವಾಸ, ಅನಿತಾಲಕ್ಷ್ಮಿ, ಡಾ. ಮಮತ, ಡಾ. ಧರಣೇಶ್ ಸೇರಿದಂತೆ ಬಿ.ಎ. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
