ಕುಣಿಗಲ್ : ಪತಿ-ಪತ್ನಿಯ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 16 ವರ್ಷದ ಮಗನನ್ನೇ ತಂದೆ ಹತ್ಯೆ ಮಾಡಿರುವ ದಾರುಣ ಘಟನೆ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಗ್ರಾಮದ ನಂಜಪ್ಪ ಅಲಿಯಾಸ್ ನಂಜೇಗೌಡ ಎಂಬಾತನೇ ಮಗ ಸುನೀಲ್ (16) ನನ್ನು ಹತ್ಯೆಗೈದ ಆರೋಪಿ. ಮದ್ಯ ವ್ಯಸನಿಯಾಗಿದ್ದ ಈತ ಪತ್ನಿ ರಂಜಿತಾ ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಇತ್ತೀಚೆಗೆ ಬಿಡುಗಡೆಯಾಗಿದ್ದ. ಜಮೀನಿನ ಸ್ವಲ್ಪ ಭಾಗವನ್ನು ಮಾರಾಟ ಮಾಡಿದ್ದ ಆತ, ಮದ್ಯಪಾನದ ಚಟಕ್ಕೆ ಒಳಗಾಗಿ ಕ್ಷುಲ್ಲಕ ಕಾರಣಗಳಿಗೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಜಗಳ ಬಿಡಿಸಲು ಬಂದ ಮಗನ ಮೇಲೆ ಹಲ್ಲೆ:
ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ನಂಜೇಗೌಡ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದುದನ್ನು ಗಮನಿಸಿದ ಮಗ ಸುನೀಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾನೆ. ಈ ವೇಳೆ ಕೋಪಗೊಂಡ ತಂದೆ ಪತ್ನಿಯನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯ ಬಾಗಿಲು ತೆರೆಯಲು ಮುಂದಾದ ಮಗನೊಂದಿಗೆ ಗಲಾಟೆ ನಡೆಸಿ, ಮನೆಯಲ್ಲಿದ್ದ ತೆಂಗಿನಕಾಯಿ ಸುಲಿಯುವ ಉಪಕರಣದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರ ಮೇಲೂ ಹಲ್ಲೆಗೆ ಯತ್ನ:
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾದಾಗ ಆತ ಮನೆಯ ಬಾಗಿಲು ತೆರೆಯದೆ ಪ್ರತಿರೋಧ ತೋರಿದ್ದಾನೆ. ಬಾಗಿಲು ಮುರಿದು ಒಳಪ್ರವೇಶಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿಯ ಕೈಯಲ್ಲಿದ್ದ ಆಯುಧವನ್ನು ವಶಪಡಿಸಿಕೊಂಡು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಮೃತ ಬಾಲಕನ ಸಂಬಂಧಿಕರು ಹಾಗೂ ಸ್ಥಳೀಯರು ಪೊಲೀಸರ ಸಮ್ಮುಖದಲ್ಲೇ ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಆರೋಪಿಯನ್ನು ವಶಕ್ಕೆ ಪಡೆದರು.
ತಂದೆಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದ ಬಾಲಕ:
ಮೃತ ಸುನೀಲ್ ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ಹಿಂದೆ ತಂದೆ ತಾಯಿಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಸುನೀಲ್ ನ್ಯಾಯಾಲಯಕ್ಕೆ ತೆರಳಿ ತಂದೆಯ ವಿರುದ್ಧ ಸಾಕ್ಷ್ಯ ಹೇಳಿ ತಾಯಿಯ ಪರವಾಗಿ ನಿಂತಿದ್ದ ಎನ್ನಲಾಗಿದೆ. ಇದರಿಂದ ತಂದೆ ಮಗನ ಮೇಲೆ ದ್ವೇಷ ಹೊಂದಿದ್ದ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನ್ಯಾಯಾಲಯದಲ್ಲಿ ಸುನೀಲ್ ಸಾಕ್ಷ್ಯ ಹೇಳಬೇಕಿತ್ತು ಎನ್ನಲಾಗಿದೆ. ಪ್ರಕರಣವನ್ನು ವಾಪಸ್ ಪಡೆಯುವಂತೆ ಪತ್ನಿ ಹಾಗೂ ಮಗನಿಗೆ ಆರೋಪಿ ಒತ್ತಡ ಹೇರುತ್ತಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಭಾನುವಾರ ಬೆಳಗಿನ ಜಾವ ಮತ್ತೆ ಗಲಾಟೆ ನಡೆದಿದ್ದು, ತಾಯಿಯ ಎದುರೇ ಮಗನ ಹತ್ಯೆಯಾಗಿದೆ.
ಘಟನಾ ಸ್ಥಳಕ್ಕೆ ಕುಣಿಗಲ್ ಶಾಸಕ ಡಾ. ರಂಗನಾಥ್ ಭೇಟಿ ನೀಡಿ ಮೃತ ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆರೋಪಿಯ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
