ಬೀದರ್: ಜಿಲ್ಲೆಯ ಔರಾದ್ ಪಟ್ಟಣದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ‘ಔರಾದ್ ತಾಲ್ಲೂಕು ನಾಗರಿಕ ಸಂಘರ್ಷ ಸಮಿತಿ’ ಕರೆ ನೀಡಿದ್ದ ಬಂದ್ಗೆ ಮಂಗಳವಾರ ಪಟ್ಟಣದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಕೈಜೋಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂದಿತು.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದರೂ, ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿರುವ ಆಡಳಿತ ವ್ಯವಸ್ಥೆಯ ವಿರುದ್ಧ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ನಾಗರಿಕ ಸಮಿತಿಯ ಪ್ರಮುಖರು ಬಸವೇಶ್ವರ ವೃತ್ತದ ಸಮೀಪ ಜಮಾಯಿಸಿದ್ದು, ಅಲ್ಲಿಂದ ಬೃಹತ್ ಮೆರವಣಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ.

ಪ್ರತಿಭಟನೆಯಲ್ಲಿ ನಾಗರಿಕ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಧನರಾಜ ರಾಗಾ, ಪ್ರಮುಖರಾದ ಬಸವರಾಜ ಶೆಟಕಾರ, ಕಲ್ಲಪ್ಪ ದೇಶಮುಖ, ಅನಿಲ ಜೀರೊಬೆ, ರಾಹುಲ್ ಖಂದಾರೆ, ರತ್ನದೀಪ್ ಕಸ್ತೂರೆ, ಸಂತೋಷ ಸೂರ್ಯವಂಶಿ, ಲಕ್ಷ್ಮಣ ದೇವಕತ್ತೆ, ಅನೀಲ ದೇವಕತ್ತೆ, ಬಂಟಿ ದರ್ಬಾರೆ, ಸುನೀಲ ಮಿತ್ರಾ, ಅನೀಲಕುಮಾರ ನಿರ್ಮಳೆ, ಆನಂದ ದ್ಯಾಡೆ ಸೇರಿದಂತೆ ನೂರಾರು ನಾಗರಿಕರು ಪಾಲ್ಗೊಂಡಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
