ಮಧುಗಿರಿ: ಏಕಶಿಲೆಯಾಗಿ ಆಕಾಶದೆತ್ತರಕ್ಕೆ ತಲೆ ಎತ್ತಿ ನಿಂತಿರುವ ಐತಿಹಾಸಿಕ ಮಧುಗಿರಿ ಬೆಟ್ಟ ಭಾನುವಾರ ಸಾವಿರಾರು ಚಾರಣಿಗರ ಸಾಹಸ, ಸಂಭ್ರಮಕ್ಕೆ ಸಾಕ್ಷಿಯಾಯಿತು. ರೋಟರಾಕ್ಸ್ ಜಿಲ್ಲಾ ಪರಿಷತ್ ವತಿಯಿಂದ ಆಯೋಜಿಸಿದ್ದ ಬೃಹತ್ ಚಾರಣ ಕಾರ್ಯಕ್ರಮದಲ್ಲಿ ಬೆಂಗಳೂರು, ಕೋಲಾರ, ಕೆಜಿಎಫ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ 4 ಸಾವಿರಕ್ಕೂ ಹೆಚ್ಚು ಚಾರಣಿಗರು ಏಕಕಾಲದಲ್ಲಿ ಬೆಟ್ಟ ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಸಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಚಾರಣದ ಜತೆಗೆ ಶಿಕ್ಷಣ ಸೇವೆಯ ಉದ್ದೇಶವನ್ನೂ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಧುಗಿರಿ ಬೆಟ್ಟದ ಮುಖ್ಯ ದ್ವಾರದ ಬಳಿ ಬರೋಬ್ಬರಿ 25 ಸಾವಿರ ಪೆನ್ಸಿಲ್ಗಳನ್ನು ಬಳಸಿ ವಿಶೇಷ ಕಲಾಕೃತಿ ನಿರ್ಮಿಸಲಾಗಿದೆ. ಅಲ್ಲದೆ, 25 ಸಾವಿರ ಪೆನ್ಸಿಲ್ ಹಾಗೂ 7,777 ನೋಟ್ ಬುಕ್ಗಳನ್ನು ಬುಡಕಟ್ಟು ಸಮುದಾಯದ ಮಕ್ಕಳಿಗೆ ವಿತರಿಸುವ ಮೂಲಕ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಸಂದೇಶ ಸಾರಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದ್ದಂತೆ ಸಾವಿರಾರು ಚಾರಣಿಗರು ಬೆಟ್ಟದತ್ತ ಹೆಜ್ಜೆ ಹಾಕಿದರು. ಕಲ್ಲುಬಂಡೆಗಳ ನಡುವಿನ ದುರ್ಗಮ ಹಾದಿ ಹಾಗೂ ಕಡಿದಾದ ಏರುದಾರಿಯನ್ನು ಲೆಕ್ಕಿಸದೆ ಸಾಹಸಪ್ರಿಯರು ಉತ್ಸಾಹದಿಂದ ಚಾರಣ ಕೈಗೊಂಡರು. ಬೆಟ್ಟದ ತುದಿ ತಲುಪಿದ ಚಾರಣಿಗರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಭಕ್ತಿಯ ಸಂಭ್ರಮ ಮೆರೆದರು.
ಏಷ್ಯಾದ ಎರಡನೇ ಅತಿ ಎತ್ತರದ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧುಗಿರಿ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಚಾರಣಿಗರು ಏಕಕಾಲದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು. 50ಕ್ಕೂ ಹೆಚ್ಚು ಗುಂಪುಗಳಾಗಿ ವಿಂಗಡಿಸಿ ಚಾರಣ ಆಯೋಜಿಸಲಾಗಿತ್ತು. ಈ ಮೂಲಕ ಮಧುಗಿರಿಯ ಐತಿಹಾಸಿಕ, ಭೌಗೋಳಿಕ ಹಾಗೂ ಪ್ರವಾಸಿ ಮಹತ್ವವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ನಡೆಯಿತು.
ಸಾವಿರಾರು ಜನರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳಿಗೂ ಆದ್ಯತೆ ನೀಡಲಾಗಿತ್ತು. ಚಾರಣಿಗರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ ತುರ್ತು ಆರೋಗ್ಯ ಸೇವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಇಂಟರ್ ನ್ಯಾಷನಲ್ ನಿರ್ದೇಶಕ ಕೆ.ಪಿ. ನಾಗೇಶ್, ರೋಟರಿ ಜಿಲ್ಲಾಧ್ಯಕ್ಷ ರವಿಶಂಕರ್ ಸೇರಿದಂತೆ ವಿವಿಧ ಗಣ್ಯರು, ಸಂಘಟಕರು ಹಾಗೂ ಸಾವಿರಾರು ಚಾರಣಿಗರು ಭಾಗವಹಿಸಿದ್ದರು.
ಒಟ್ಟಾರೆ, ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ನಡೆದ ಬೃಹತ್ ಚಾರಣ ಕಾರ್ಯಕ್ರಮವು ಸಾಹಸ ಮನೋಭಾವ, ಸಾಮೂಹಿಕ ಪಾಲ್ಗೊಳ್ಳುವಿಕೆ ಹಾಗೂ ಶಿಕ್ಷಣದ ಸಾಮಾಜಿಕ ಕಳಕಳಿಯನ್ನು ಒಟ್ಟುಗೂಡಿಸಿತು. ಒಂದೇ ದಿನ 4 ಸಾವಿರಕ್ಕೂ ಹೆಚ್ಚು ಮಂದಿ ಚಾರಣ ಕೈಗೊಂಡಿದ್ದು ಮಧುಗಿರಿಯ ಪ್ರವಾಸೋದ್ಯಮದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
