ಪಾವಗಡ: ದೂರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬಂದಿದ್ದ ಯುವಕನ ಮೇಲೆ ಠಾಣೆಯ ಆವರಣದಲ್ಲೇ ಖಾರದ ಪುಡಿ ಎರಚಿ ಚಾಕುವಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಭಾನುವಾರ ನಡೆದ ಈ ಘಟನೆಯಿಂದ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರ ಸುರಕ್ಷತೆ ಪ್ರಶ್ನೆಯಾಗಿದೆ. ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿ ಗಾಯಾಳು ನವೀನ್ ಹಾಗೂ ಕುಟುಂಬಸ್ಥರು ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕಾವಲಗೆರೆ ಬಡಾವಣೆಯ ಮಂಜುನಾಥ ಎಂಬುವವರು ಗುರುವಾರ ರಾತ್ರಿ ಐವಾರ್ಲಹಳ್ಳಿಯಲ್ಲಿರುವ ತಮ್ಮ ಪತ್ನಿ ಮಧುಶ್ರೀ ಅವರ ತವರು ಮನೆಗೆ ನುಗ್ಗಿ ಗಲಾಟೆ ನಡೆಸಿ, ಟಿ.ವಿ., ಸೋಲಾರ್, ಸೋಕೇಸ್ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶುಕ್ರವಾರ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣದ ವಿಚಾರಣೆಗಾಗಿ ಪೊಲೀಸರು ಭಾನುವಾರ ದೂರುದಾರರ ಕಡೆಯ ನವೀನ್ ಅವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಠಾಣೆಯೊಳಗೆ ಪ್ರವೇಶಿಸುತ್ತಿದ್ದಂತೆ ಏಕಾಏಕಿ ಮುಖಕ್ಕೆ ಖಾರದ ಪುಡಿ ಎರಚಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ತಪ್ಪಿಸಿಕೊಳ್ಳಲು ನವೀನ್ ಬಲಗೈ ಅಡ್ಡ ಹಿಡಿದ ಪರಿಣಾಮ ಮಧ್ಯದ ಬೆರಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಗುರುವಾರ ರಾತ್ರಿ ನಡೆದ ಗಲಾಟೆ ಹಾಗೂ ವಸ್ತುಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರವೇ ಠಾಣೆಯ ಎಸ್ಎಚ್ಒ ರವಿ ಅವರಿಗೆ ದೂರು ನೀಡಿದ್ದರೂ, ಮೂರು ದಿನ ಕಳೆದರೂ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸ್ ಠಾಣೆಯ ಆವರಣದಲ್ಲಿಯೇ ಪೊಲೀಸರ ಸಮ್ಮುಖದಲ್ಲಿ ಹಲ್ಲೆ ನಡೆದಿರುವುದು ಗಂಭೀರ ವಿಚಾರವಾಗಿದ್ದು, ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಕುಟುಂಬಸ್ಥರಿಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಹಾಗೂ ಆರೋಪಿಯನ್ನು ಹೊರಗಡೆ ಬಿಡಲಾಗಿದೆ ಎಂದು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನವೀನ್ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ದೂರುದಾರರ ಮೇಲೆ ಹಲ್ಲೆ ನಡೆದಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಹಲ್ಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
