ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ಮತ್ತು ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನವೆಂಬರ್ 26 ರಂದು ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗದಲ್ಲಿ ಸಂವಿಧಾನ ಪೀಠಿಕೆ ಓದುವುದರ ಮೂಲಕ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸಿಹಿ ಹಂಚಿ, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಸಂಕಲ್ಪವನ್ನು ಪುನರುಚ್ಚರಿಸುವ ದಿನ ಸಂವಿಧಾನ ಸಮರ್ಪಣೆ ದಿವಸ್ ಅನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್ ವಹಿಸಿಕೊಂಡು ಮಾತನಾಡುತ್ತಾ, ನವೆಂಬರ್ 26 ಕೇವಲ ಒಂದು ಆಚರಣೆಯ ದಿನವಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕು, ಸ್ವಾಭಿಮಾನ ಮತ್ತು ಘನತೆಯನ್ನು ಅರಿತುಕೊಳ್ಳಬೇಕಾದ ಐತಿಹಾಸಿಕ ದಿನ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನವೆಂಬರ್ 26 ಅತ್ಯಂತ ಮಹತ್ವದ ದಿನವಾಗಿದೆ. 1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿ, ಶಾಸನಬದ್ಧವಾಗಿ ಸ್ವೀಕರಿಸಿತು. ನಂತರ 1950ರ ಜನವರಿ 26ರಂದು ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬಂತು. ಈ ಐತಿಹಾಸಿಕ ದಿನದ ಸ್ಮರಣಾರ್ಥ 2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಹರಿಕಥಾ ವಿದ್ವಾನರಾದ ಡಾ. ಲಕ್ಷ್ಮಣ ದಾಸ್ ಮಾತನಾಡುತ್ತ ಸಂವಿಧಾನದ ರಚನೆ ಒಂದು ಐತಿಹಾಸಿಕ ಹೋರಾಟದ ಫಲ ಭಾರತದ ಸಂವಿಧಾನ ರಚನಾ ಸಭೆಯ ಮೊದಲ ಸಭೆ 1946ರ ಡಿಸೆಂಬರ್ 9ರಂದು ನಡೆಯಿತು. 1947ರ ಆಗಸ್ಟ್ 29ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ಸಮಿತಿಯನ್ನು ರಚಿಸಿ ಸುಮಾರು ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನೇಳು ದಿನಗಳ ಸುದೀರ್ಘ ಚರ್ಚೆ, ವಿಚಾರ ವಿನಿಮಯ ಹಾಗೂ ಅಧ್ಯಯನದ ನಂತರ ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಸಂವಿಧಾನ ರಚನೆಯಲ್ಲಿ ದೇಶದ ವಿವಿಧ ಭಾಗಗಳ ಪ್ರತಿನಿಧಿಗಳು, ಕಾನೂನು ತಜ್ಞರು, ಸಮಾಜ ಸುಧಾರಕರು ಹಾಗೂ ಸಂವಿಧಾನ ರಚನಾ ಸಭೆಯ ಸದಸ್ಯರು ಮಹತ್ವದ ಕೊಡುಗೆ ನೀಡಿದ್ದಾರೆ, ಅವರುಗಳ ಸ್ಮರಣಾರ್ಥವಾಗಿ ಇಂದು ಸಂವಿಧಾನ ಸಮರ್ಪಣಾ ದಿವಸ್ ಆಚರಣೆಯನ್ನು ಮಾಡುತ್ತಿದ್ದೇವೆಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಪಿ.ಎನ್ ರಾಮಯ್ಯ ಮಾತನಾಡುತ್ತ ಸಂವಿಧಾನದ ಪೀಠಿಕೆ ಭಾರತೀಯ ಪ್ರಜಾಪ್ರಭುತ್ವದ ಆತ್ಮ. ಭಾರತದ ಸಂವಿಧಾನದ ಪೀಠಿಕೆಯು ಸಂವಿಧಾನದ ಮೂಲ ಆಶಯ ಮತ್ತು ಗುರಿಗಳನ್ನು ಸ್ಪಷ್ಟಪಡಿಸುತ್ತದೆ. ನಾವು ಭಾರತದ ಜನರು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಸಂಕಲ್ಪ ಮಾಡಿದ್ದೇವೆ ಎಂದು ಪೀಠಿಕೆ ಘೋಷಿಸುತ್ತದೆ.ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ.ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ.ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ.ವ್ಯಕ್ತಿಯ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಭ್ರಾತೃತ್ವ.ಈ ಮೌಲ್ಯಗಳನ್ನು ಒದಗಿಸುವುದು ಸಂವಿಧಾನದ ಪ್ರಮುಖ ಉದ್ದೇಶವಾಗಿದೆಂದು ನುಡಿದರು.
ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರಕಾಶ್ ಪಿ.ಎಚ್ ಮಾತನಾಡುತ್ತಾ ಅಸ್ಪೃಶ್ಯತೆಯ ವಿರುದ್ಧ ಭಾರತದ ಇತಿಹಾಸದಲ್ಲೇ ಮಹತ್ವದ ಕಾನೂನು ಕ್ರಾಂತಿಯಾಗಿದೆ. ಶತಮಾನಗಳಿಂದ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಹೆಸರಿನಲ್ಲಿ ಅವಮಾನ, ಶೋಷಣೆ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಸಮುದಾಯಗಳಿಗೆ ಸಂವಿಧಾನವು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ.
ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಮಹತ್ವ ಭಾರತದಲ್ಲಿ ಶತಮಾನಗಳಿಂದ ಜಾತಿ ಆಧಾರಿತ ಅಸಮಾನತೆ, ಶಿಕ್ಷಣದಿಂದ ವಂಚನೆ, ಸಾಮಾಜಿಕ ಬಹಿಷ್ಕಾರ ಮತ್ತು ಆರ್ಥಿಕ ಶೋಷಣೆ ಅಸ್ತಿತ್ವದಲ್ಲಿದ್ದವು. ಇಂತಹ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ಮೀಸಲಾತಿ ಎನ್ನುವುದು ಯಾರಿಗಾದರೂ ನೀಡುವ ದಯೆ ಅಥವಾ ಅನುಕಂಪವಲ್ಲ. ಐತಿಹಾಸಿಕವಾಗಿ ಅವಕಾಶಗಳಿಂದ ವಂಚಿತರಾದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸಾಧನವಾಗಿದೆ ಎಂದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷರು ಇಂದ್ರೂ ಕುಮಾರ್ ಡಿ.ಕೆ ಮಾತನಾಡುತ್ತ ನವೆಂಬರ್ 26 ನಮ್ಮ ಪಾಲಿಗೆ ಕೇವಲ ಕ್ಯಾಲೆಂಡರ್‌ನ ಒಂದು ದಿನವಾಗಬಾರದು. ಭಾರತದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಆಶಯಗಳನ್ನು ಅರಿತುಕೊಂಡು, ಅವುಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅನುಸರಿಸುವ ದಿನವಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಶ್ರಮಿಸಿದ ಮಹನೀಯರ ಕನಸು ನನಸಾಗಬೇಕಾದರೆ ಜಾತಿ ಅಸಮಾನತೆ, ಅಸ್ಪೃಶ್ಯತೆ, ಶೋಷಣೆ ಮತ್ತು ಸಾಮಾಜಿಕ ಅನ್ಯಾಯಗಳಿಗೆ ಅಂತ್ಯ ಹಾಡಬೇಕು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷ ಎನ್.ಕೆ.ನಿಧಿಕುಮಾರ್, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ರಾಜ್ಯದ್ಯಕ್ಷ ಪ್ರಕಾಶ್ ಎಚ್.ಪಿ, ಕೇಂದ್ರ ಅಕಾಡೆಮಿ ನಾಟಕ ಪ್ರಶಸ್ತಿ ಪುರಸ್ಕೃತರು ಹಾಗೂ ಹರಿಕಥೆ ವಿದ್ವಾಂಸರು ಡಾ. ಲಕ್ಷ್ಮಣ ದಾಸ್, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾ ಅಧ್ಯಕ್ಷರು ರಾಮಾಂಜನೇಯ, ಜಯನುಡಿ ದಿನಪತ್ರಿಕೆ ಸಂಪಾದಕರು ಹಾಗೂ ಕೆಯುಡಬ್ಲ್ಯೂಜೆ ಜಿಲ್ಲಾ ಉಪಾಧ್ಯಕ್ಷರಾದ ಸಿ.ಜಯಣ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಪಿ.ಎನ್ ರಾಮಯ್ಯ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷ ಇಂದ್ರಕುಮಾರ್ ಡಿ.ಕೆ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎಸ್, ಮುಖಂಡರುಗಳಾದ ಟಿ.ಆರ್.ನಾಗೇಶ್, ಗುರುಪ್ರಸಾದ್ ಟಿ.ಆರ್, ಜೈಪುರ ರುದ್ರೇಶ್, ಶಿವಾಜಿ, ಪ್ರತಾಪ್, ಅರುಣ್ ಕುಮಾರ್, ರಾಜಣ್ಣ ಸಿ, ಟೈಲರ್ ಜಗದೀಶ್, ಚಂದ್ರಪ್ಪ, ಗುಳೂರು ರಾಜಣ್ಣ, ಕೆಸ್ತೂರ್ ನರಸಿಂಹಮೂರ್ತಿ, ಜಗಣ್ಣ, ಶ್ರೀನಿವಾಸ್ ದಿಬ್ಬೂರು, ಸಿದ್ದಲಿಂಗಯ್ಯ ಗೌಡಿಹಳ್ಳಿ, ಟಿ.ಡಿ ನರಸಿಂಹಮೂರ್ತಿ, ಸಿದ್ದಲಿಂಗಯ್ಯ ಕೆ.ಎನ್, ಕಿರಣ್ ಕುಮಾರ್ ಕೋತಿ ತೋಪು, ಮಾನಂಗಿ ಚಂದ್ರು, ಗಂಗಸಂದ್ರ ಸುರೇಶ್ ಜಿ. ಆರ್, ರಂಗಸ್ವಾಮಯ್ಯ ಕುತ್ತಿಹಳ್ಳಿ, ಜಯಂತು, ಸುಪ್ರೀಂ, ದೊಡ್ಡಯ್ಯ, ಒಕ್ಕೋಡಿ ಶೇಖರ್ ಇನ್ನು ಮುಂತಾದವರು ಉಪಸ್ಥಿರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
