ಕುಣಿಗಲ್ : ಮಹಾನ್ ಸಂತ ಕನಕದಾಸರು ಭಕ್ತಿ ಪರಂಪರೆಯ ಮೂಲಪುರುಷರಾಗಿ, ತಮ್ಮ ದಾಸ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜಮುಖಿ ಚಿಂತನೆಗಳನ್ನು ಜನರಿಗೆ ಸಾರುವ ಮೂಲಕ ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾಮಣಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕುರುಬ ಸಮಾಜದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸುಮಾರು 500 ವರ್ಷಗಳ ಹಿಂದೆ ವ್ಯಾಸರಾಯರ ಪ್ರಭಾವದಿಂದ ಹರಿಭಕ್ತಿಯ ಮಾರ್ಗದಲ್ಲಿ ಸಾಗಿದ ಕನಕದಾಸರು ಆಧ್ಯಾತ್ಮಿಕ ಸಾಹಿತ್ಯ, ದಾಸ ಕೀರ್ತನೆ ಹಾಗೂ ಸಂಗೀತದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅಸ್ಪೃಶ್ಯತೆ, ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಅವರ ಆದರ್ಶ, ನೀತಿ, ನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮಕ್ಕಳಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡಯ್ಯ ಮಾತನಾಡಿ, ಕನಕದಾಸರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೆ ಸಮಾಜದ ಎಲ್ಲ ವರ್ಗದ ಜನರ ನಂಬಿಕೆ, ಆಶೋತ್ತರಗಳಿಗೆ ಸ್ಪಂದಿಸಿದ ಮಹಾನ್ ಸಂತರು. ಮೇಲು-ಕೀಳು ಎಂಬ ಭೇದಭಾವವನ್ನು ವಿರೋಧಿಸಿ ತಮ್ಮ ಕೀರ್ತನೆಗಳ ಮೂಲಕ ಸಾಮಾನ್ಯ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ತಾಲೂಕಿನಲ್ಲಿ ಕನಕದಾಸರ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕರಿಯ ನಾಯಕ್ ಮಾತನಾಡಿ, 16ನೇ ಶತಮಾನದಲ್ಲಿ ಜನಿಸಿದ ಕನಕದಾಸರ ಕೀರ್ತನೆಗಳು ಇಂದಿಗೂ ಗ್ರಾಮೀಣ ಜನರ ಬದುಕಿನಲ್ಲಿ ಪ್ರಭಾವ ಬೀರಿವೆ. ಅವರ ದೃಢಸಂಕಲ್ಪ, ಜ್ಞಾನಾರ್ಜನೆ ಹಾಗೂ ಉತ್ತಮ ಗುಣಗಳನ್ನು ಅಧ್ಯಯನ ಮಾಡುವ ಮೂಲಕ ನಾವೆಲ್ಲರೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಸರ್ಕಾರ ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಆದರ್ಶ ಮತ್ತು ಕೀರ್ತನೆಗಳನ್ನು ಸ್ಮರಿಸುವ ಕಾರ್ಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕುರುಬ ಸಂಘದ ಗೌರವ ಅಧ್ಯಕ್ಷ ಡಿ. ಮುನಿಯಪ್ಪ, ಡಾ. ಚಿಕ್ಕಕಂಬಯ್ಯ, ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್, ಸಿಡಿಪಿಒ ಕಮಲ, ಡಾ. ಮುರಿಯಪ್ಪ, ದಲಿತ ಮುಖಂಡರಾದ ವರದರಾಜು, ಹಿಂದುಳಿದ ವರ್ಗಗಳ ಮುಖಂಡರಾದ ನಾರಾಯಣಸ್ವಾಮಿ, ಕೆಂಚಪ್ಪ, ಕೋಳಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
