ವರನಟ ಡಾ. ರಾಜ್ಕುಮಾರ್ ಅವರ ಸಿನಿಮಾಗಳ ಕ್ರೇಜ್ ಹೇಗಿತ್ತೆಂದರೆ, ಚಿತ್ರ ಬಿಡುಗಡೆಯಾಗುವ ಒಂದು ದಿನ ಮುಂಚೆಯೇ ಅಭಿಮಾನಿಗಳು ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕಾಲದಲ್ಲೂ ಅಣ್ಣಾವ್ರ ಹವಾ ಕಡಿಮೆಯಾಗಿರಲಿಲ್ಲ.
ಆ ಸಂದರ್ಭದಲ್ಲಿ ದೊಡ್ಮನೆಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಬಂದರೆ, ಯಾರನ್ನು ಭೇಟಿಯಾಗಲು ಬಂದಿದ್ದಾರೆ ಎಂಬ ಗೊಂದಲ ಸಹಜವಾಗಿ ಇರುತ್ತಿತ್ತಂತೆ. ಹೀಗೆ ಹಿರಿಯ ಪುತ್ರ ಶಿವರಾಜ್ಕುಮಾರ್ ಅವರಿಗೆ ಬಂದಿದ್ದ ಒಂದು ಅದ್ಭುತ ಸಿನಿಮಾ ಆಫರ್, ಕೊನೆಗೆ ಡಾ. ರಾಜ್ಕುಮಾರ್ ಪಾಲಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.
30ರ ಹರೆಯದ ಶಿವಣ್ಣನಿಗೇಕೆ ಆ ಪಾತ್ರ ಹೊಂದಿಕೆಯಾಗಲಿಲ್ಲ?
ಈ ಸಿನಿಮಾದ ಆಫರ್ ಬಂದಾಗ ಶಿವರಾಜ್ಕುಮಾರ್ ಅವರಿಗೆ ಕೇವಲ 30 ವರ್ಷ ವಯಸ್ಸು. ಆಗ ಶಿವಣ್ಣ ಯಂಗ್ ಆ್ಯಂಡ್ ಎನರ್ಜೆಟಿಕ್ ಹೀರೋ ಆಗಿ, ಹೆಚ್ಚಾಗಿ ಪ್ರೇಮಕಥೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದರು. ತೆರೆ ಮೇಲೆ ಅವರು 18ರ ಹರೆಯದ ಹುಡುಗನಂತೆ ಕಾಣಿಸುತ್ತಿದ್ದರು. ಆದರೆ, ಈ ಚಿತ್ರದ ನಾಯಕನ ಪಾತ್ರಕ್ಕೆ ಮಧ್ಯವಯಸ್ಕ ವ್ಯಕ್ತಿಯ ಗಾಂಭೀರ್ಯ ಮತ್ತು ಹೆಚ್ಚಿನ ಪ್ರಬುದ್ಧತೆಯ (ಮೆಚ್ಯೂರಿಟಿ) ಅಗತ್ಯವಿತ್ತು. ಹೀಗಾಗಿ ಕಥೆ ಕೇಳಿದಾಗ, ಶಿವಣ್ಣನಿಗಿಂತ ಅಣ್ಣಾವ್ರು ನಟಿಸಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸ್ವತಃ ಪಾರ್ವತಮ್ಮ ರಾಜ್ಕುಮಾರ್ ಅವರೂ ಇದಕ್ಕೆ ಸಹಮತ ಸೂಚಿಸಿದ್ದರು.
ಇತಿಹಾಸ ಬರೆದ 1993ರ ‘ಆಕಸ್ಮಿಕ’!
ಅಣ್ಣಾವ್ರ ಪಾಲಾದ ಆ ಸಿನಿಮಾ ಬೇರಾವುದೂ ಅಲ್ಲ, 1993ರಲ್ಲಿ ಬಿಡುಗಡೆಯಾದ ಸಾರ್ವಕಾಲಿಕ ಹಿಟ್ ‘ಆಕಸ್ಮಿಕ’. ಟಿ.ಎಸ್. ನಾಗಭರಣ ನಿರ್ದೇಶನದ, ಎಸ್.ಎ. ಗೋವಿಂದರಾಜು ನಿರ್ಮಾಣದ ಈ ಚಿತ್ರದಲ್ಲಿ ‘ನರಸಿಂಹಮೂರ್ತಿ’ ಪಾತ್ರದಲ್ಲಿ ಡಾ. ರಾಜ್ಕುಮಾರ್ ಪರಕಾಯ ಪ್ರವೇಶ ಮಾಡಿದ್ದರು. ಮಾಧವಿ, ಗೀತಾ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪಂಡರೀಬಾಯಿ, ಸುಂದರ್ರಾಜ್ ಅವರಂತಹ ದಿಗ್ಗಜ ಕಲಾವಿದರ ದಂಡೇ ಈ ಚಿತ್ರದಲ್ಲಿತ್ತು.
‘ಆಕಸ್ಮಿಕ’ ಎಂದ ತಕ್ಷಣ ನೆನಪಾಗುವುದು ಹಂಸಲೇಖ ಸಂಗೀತ ಹಾಗೂ ಅಣ್ಣಾವ್ರ ಧ್ವನಿಯಲ್ಲಿ ಮೂಡಿಬಂದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು. ಆರಂಭದಲ್ಲಿ ಈ ಹಾಡನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುವಂತೆ ಪಾರ್ವತಮ್ಮ ಸಲಹೆ ನೀಡಿದ್ದರಂತೆ. ಆದರೆ ನಿರ್ದೇಶಕರು ಸವಾಲಾಗಿ ಸ್ವೀಕರಿಸಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಜನಸಾಗರದ ನಡುವೆ ಚಿತ್ರೀಕರಿಸಿ ದಾಖಲೆ ಬರೆದಿದ್ದರು.
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಎರಡನೇ ಅತ್ಯುತ್ತಮ ಚಿತ್ರ’ ಹಾಗೂ ‘ಅತ್ಯುತ್ತಮ ಹಿನ್ನೆಲೆ ಗಾಯಕ’ ಪ್ರಶಸ್ತಿ ಲಭಿಸಿತು. ಅಲ್ಲದೆ, ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ನಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.
ಒಟ್ಟಿನಲ್ಲಿ, ಶಿವಣ್ಣ ಮಾಡಬೇಕಿದ್ದ ಪಾತ್ರಕ್ಕೆ ಜೀವ ತುಂಬಿದ ಅಣ್ಣಾವ್ರು, ‘ಆಕಸ್ಮಿಕ’ ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಮರೆಯಲಾಗದ ಕಾಣಿಕೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
