ಕೊರಟಗೆರೆ: ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹಾಗೂ ಸಮಾಜದಲ್ಲಿನ ಮೇಲು-ಕೀಳು ಎಂಬ ತಾರತಮ್ಯದ ಬೇರುಗಳನ್ನು ಕಿತ್ತೊಗೆಯಲು ಸಂತ ಕನಕದಾಸರು ತಮ್ಮ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳ ಮೂಲಕ ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ. ಅವರ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಶುಕ್ರವಾರ ಲಕ್ಷ್ಮೀನರಸಿಂಹ ಸ್ವಾಮಿ ಸಂಸ್ಕೃತ ವೇದ ಮಹಾವಿದ್ಯಾಲಯ ಹಾಗೂ ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ವತಿಯಿಂದ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿಯ ಮಹತ್ವವನ್ನು ಸಾರುವುದರ ಜೊತೆಗೆ ಸಮಾಜದಲ್ಲಿದ್ದ ಜಾತಿ ತಾರತಮ್ಯ, ಅಸಮಾನತೆ ಹಾಗೂ ಕಂದಾಚಾರಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ ಮಹಾನ್ ದಾರ್ಶನಿಕರು. ಮನುಷ್ಯನ ಶ್ರೇಷ್ಠತೆಯನ್ನು ಆತನ ಹುಟ್ಟಿನಿಂದ ನಿರ್ಧರಿಸದೆ, ಜ್ಞಾನ, ನಡತೆ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳಿಂದ ಗುರುತಿಸಬೇಕು ಎಂಬ ಕ್ರಾಂತಿಕಾರಿ ಚಿಂತನೆಗಳನ್ನು ಸಮಾಜಕ್ಕೆ ನೀಡಿದರು.
ಅವರ ಸಾಹಿತ್ಯದಲ್ಲಿ ಅಡಕವಾಗಿರುವ ಸಮಾನತೆ, ಸಹಬಾಳ್ವೆ, ಆತ್ಮಗೌರವ ಹಾಗೂ ಮಾನವೀಯತೆಯ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ವಿದ್ಯಾರ್ಥಿಗಳು ಕನಕದಾಸರ ಜೀವನಾದರ್ಶ ಮತ್ತು ಸಾಹಿತ್ಯದ ಮೌಲ್ಯಗಳನ್ನು ಅರಿತುಕೊಂಡು ಜಾತಿ-ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಾಣದ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸದ್ವಿದ್ಯಾ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲೆ ಭ್ರಮರಾಂಬ, ಶಿಕ್ಷಕರಾದ ಗಿರೀಶ್, ದರ್ಶನ್, ಸಿಬ್ಬಂದಿಗಳಾದ ರವಿಕುಮಾರ್, ಜಗದೀಶ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
