ಕೊರಟಗೆರೆ : ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ. ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಜಗತ್ತಿನಾದ್ಯಂತ ಇಂದಿಗೂ ಅಸಮಾನತೆ, ವರ್ಣಭೇದ, ಜಾತಿ ತಾರತಮ್ಯ ಹಾಗೂ ಶ್ರೀಮಂತ-ಬಡವ ಎಂಬ ಸಾಮಾಜಿಕ ಕಂದಕಗಳು ಅಸ್ತಿತ್ವದಲ್ಲಿವೆ. ಇಂತಹ ಅನಿಷ್ಟಗಳನ್ನು ತೊಡೆದುಹಾಕಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದ ಮಹಾನ್ ಸಂತರು ಕನಕದಾಸರು ಎಂದು ತಿಳಿಸಿದರು.
ಕನಕದಾಸರು ತಮ್ಮ ಕೀರ್ತನೆ ಹಾಗೂ ಸಾಹಿತ್ಯದ ಮೂಲಕ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ಮೇಲು-ಕೀಳು ಎಂಬ ಭಾವನೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿದ್ದರು. ಮನುಷ್ಯನನ್ನು ಜಾತಿ, ವರ್ಣ ಅಥವಾ ಅಂತಸ್ತಿನಿಂದ ಅಳೆಯದೆ, ಆತನಲ್ಲಿರುವ ಮಾನವೀಯ ಗುಣ ಹಾಗೂ ವ್ಯಕ್ತಿತ್ವದ ಆಧಾರದ ಮೇಲೆ ಗೌರವಿಸಬೇಕು ಎಂಬ ಸಂದೇಶ ಸಾರಿದ್ದಾರೆ. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದರು.
ಸಮಾಜದಲ್ಲಿ ಬದಲಾವಣೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅನ್ಯಾಯ ಮತ್ತು ಅಸಮಾನತೆಗಳನ್ನು ತೊಡೆದುಹಾಕುವ ಪ್ರಯತ್ನ ನಿರಂತರವಾಗಿರಬೇಕು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಕೆ.ಎಚ್. ಉಮಾದೇವಿ, ಬೀಬಿ ಆಯಿಷಾ, ಶಿಕ್ಷಕರಾದ ಅನ್ನಪೂರ್ಣ, ದಿವ್ಯಶ್ರೀ ಎಂ.ಆರ್., ಅಶ್ವಿನಿ ಕೆ.ಆರ್., ದೀಪಾ ಎನ್., ಮಮತಾ, ಸುಜಾತ, ನಾಗವೇಣಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
