ಮಧುಗಿರಿ : ಸಮಾಜದಲ್ಲಿ ವ್ಯಕ್ತಿಯ ನಿಜವಾದ ಮೌಲ್ಯ ಹೆಚ್ಚಾಗಬೇಕಾದರೆ ದಾನ, ಧರ್ಮ ಹಾಗೂ ಸಮಾಜಸೇವೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾದೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾವ ಧರ್ಮವು ಸಮಾಜದ ಮನುಕುಲದ ಒಳಿತಿಗಾಗಿ, ದೀನದಲಿತರ ನೆರವಿಗಾಗಿ ಹಾಗೂ ದೈವಿಕ ಕಾರ್ಯಗಳಿಗಾಗಿ ದಾನಧರ್ಮವನ್ನು ಪ್ರೇರೇಪಿಸುತ್ತದೆಯೋ ಅದುವೇ ನಿಜವಾದ ಸನಾತನ ಧರ್ಮವಾಗಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ದುಡಿಮೆಯ ಕನಿಷ್ಠ ಭಾಗವನ್ನಾದರೂ ಬಡವರು, ದೀನದಲಿತರು ಹಾಗೂ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮೀಸಲಿಡಬೇಕು. ಚಾತುರ್ವಿಧ ದಾನಗಳ ಮೂಲಕ ಸಮಾಜಕ್ಕೆ ನೆರವಾದಾಗ ವ್ಯಕ್ತಿಯ ಮೌಲ್ಯ ದೇವರ ದೃಷ್ಟಿಯಲ್ಲಿ ಹೆಚ್ಚಾಗುತ್ತದೆ. ಇತ್ತೀಚೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಗೆ ವರ್ಧಮಾನ್ ಜೈನ್ ಅವರು 207 ಕೋಟಿ ರೂ. ಮೌಲ್ಯದ 201 ಕೆ.ಜಿ. ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸಿರುವುದು ದಾನದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಎಲ್ಲರೂ ಅಷ್ಟೊಂದು ಶ್ರೀಮಂತರಾಗಿರಲು ಸಾಧ್ಯವಿಲ್ಲ. ಆದರೆ ತಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ನೀಡುವ ಮನೋಭಾವ ಬೆಳೆಸಿಕೊಂಡರೆ ಅದೇ ನಿಜವಾದ ಧರ್ಮ. ಇಂತಹ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ನಮ್ಮನ್ನು ಸಂಕಷ್ಟದ ಸಂದರ್ಭಗಳಲ್ಲಿ ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸುತ್ತವೆ ಎಂದರು.
ಗ್ರಾಮದ ಯುವಕರು ಒಗ್ಗಟ್ಟಿನಿಂದ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ಪೀಳಿಗೆಗೆ ದಾನಧರ್ಮ, ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಸನಾತನ ಧರ್ಮದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಯುವ ಮುಖಂಡ ಕುರುಬರಹಳ್ಳಿ ಹರ್ಷ, ಗ್ರಾಮಸ್ಥರಾದ ಪುಟ್ಟನರಸಪ್ಪ, ಜವಲಿಂಗಪ್ಪ, ನಾಗಣ್ಣ, ಕರಿಯಣ್ಣ, ಮಲ್ಲಿಕಾರ್ಜುನಯ್ಯ, ರಾಜಣ್ಣ, ಮಹೇಶ್, ಸುರೇಶ್, ಲೋಕೇಶ್, ರಾಕೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
