
ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ
“ಉಳುವವನೇ ಹೊಲದೊಡೆಯ” ಎಂಬುದು ಕರ್ನಾಟಕದ ಭೂಸುಧಾರಣೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟಿರುವ ಕ್ರಾಂತಿಕಾರಿ ಘೋಷಣೆ. ಆದರೆ, ಇಂದಿನ ಮಧುಗಿರಿ ತಾಲೂಕಿನ ಬಗರ್ ಹುಕುಂ ಸಾಗುವಳಿದಾರ ರೈತರ ದಯನೀಯ ಸ್ಥಿತಿಯನ್ನು ಕಂಡಾಗ, ಈ ಘೋಷಣೆ ಕೇವಲ ಭಾಷಣಗಳಿಗೆ ಮತ್ತು ಕಾಗದದ ಕಡತಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಹತ್ತಾರು ವರ್ಷಗಳಿಂದ ಕಲ್ಲು–ಮುಳ್ಳುಗಳಿಂದ ಕೂಡಿದ್ದ ಬರಡು ಸರ್ಕಾರಿ ಭೂಮಿಯನ್ನು ಹಸನಾಗಿಸಿ, ತಮ್ಮ ರಕ್ತ–ಬೆವರು ಸುರಿಸಿ ಕೃಷಿ ಮಾಡುತ್ತಿರುವ ಬಡ, ಸಣ್ಣ ಮತ್ತು ಅತಿ ಸಣ್ಣ ರೈತರು ಇಂದು ತಮ್ಮದೇ ಭೂಮಿಯ ಹಕ್ಕುಪತ್ರಕ್ಕಾಗಿ (ಸಾಗುವಳಿ ಚೀಟಿ) ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಮಧುಗಿರಿ ತಾಲೂಕಿನಾದ್ಯಂತ ಸಾವಿರಾರು ಬಡ ರೈತರು ತಾವು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸುವಂತೆ ಕೋರಿ ಸರ್ಕಾರದ ನಿಯಮಾನುಸಾರ ಫಾರಂ ನಂ. 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ವರ್ಷಗಳೇ ಉರುಳಿದರೂ, ತಾಲೂಕಿನಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸಭೆ ನಿಯಮಿತವಾಗಿ ನಡೆಯದ ಕಾರಣ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಗಳಲ್ಲಿ ಧೂಳು ಹಿಡಿಯುತ್ತಿವೆ.
ಒಂದು ಕಡೆ ಹಕ್ಕುಪತ್ರ ಇಲ್ಲದ ಕಾರಣ ಬಡ ರೈತರಿಗೆ ಸರ್ಕಾರದ ಕೃಷಿ ಯೋಜನೆಗಳು, ಬೆಳೆ ವಿಮೆ, ಬ್ಯಾಂಕ್ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಮತ್ತೊಂದೆಡೆ, ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಒಕ್ಕಲೆಬ್ಬಿಸುವ ಆತಂಕ ರೈತರನ್ನು ನಿತ್ಯವೂ ಕಾಡುತ್ತಿದೆ. ಸಭೆ ಕರೆಯಲು ಇರುವ ತಾಂತ್ರಿಕ ಅಡಚಣೆಗಳಾದರೂ ಏನು? ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಈ ನಿರ್ಲಕ್ಷ್ಯಕ್ಕೆ ಬಡ ಅನ್ನದಾತ ಏಕೆ ಬಲಿಯಾಗಬೇಕು?
ಆಡಳಿತ ವ್ಯವಸ್ಥೆಯ ಈ ಜಡತ್ವವನ್ನು ಬಡಿದೆಬ್ಬಿಸಲು ಮಧುಗಿರಿಯಿಂದ ತುಮಕೂರು ಜಿಲ್ಲಾಡಳಿತ ಕಚೇರಿಯವರೆಗೆ ಹಮ್ಮಿಕೊಂಡಿರುವ ‘ತುಮಕೂರು ಚಲೋ’ ಬೃಹತ್ ಕಾಲ್ನಡಿಗೆ ಜಾಥಾ ಒಂದು ಐತಿಹಾಸಿಕ ಜನಚಳವಳಿಯ ರೂಪ ಪಡೆದುಕೊಂಡಿದೆ. ಈ ಹೋರಾಟಕ್ಕೆ ನಾಡಿನ ಹಿರಿಯ ಹೋರಾಟಗಾರರು, ಕಾನೂನು ತಜ್ಞರು, ಪತ್ರಕರ್ತರು ಹಾಗೂ ವಿವಿಧ ಪ್ರಗತಿಪರ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಹೆಗಲು ಕೊಟ್ಟು ನಿಂತಿರುವುದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆ.
ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರಾದ ಜಟ್ಟಿ ಅಗ್ರಹಾರ ನಾಗರಾಜು (ಟೈಗರ್ ನಾಗ್), ಸಾಮಾಜಿಕ ಚಿಂತಕರಾದ ಕಸವನಹಳ್ಳಿ ರಮೇಶ್, ಬೆಂಗಳೂರಿನ ಹಿರಿಯ ಹೋರಾಟಗಾರ ಹೆಚ್. ಎಂ. ವೆಂಕಟೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನರಸಿಂಹಯ್ಯ ಜನಕಲೋಟಿ, ಪತ್ರಕರ್ತ ಹಾಗೂ ಹೋರಾಟಗಾರ ಸಿದ್ದೇಶ್ ಎನ್. ಎಸ್. ನೇಗಲಾಲ, ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರು ಈ ಹೋರಾಟಕ್ಕೆ ನೈತಿಕ ಶಕ್ತಿ ತುಂಬಿದ್ದಾರೆ.
ಇದರೊಂದಿಗೆ ಕಾನೂನು ಹೋರಾಟದ ಬಲ ನೀಡಲು ಬೆಂಗಳೂರಿನ ವಕೀಲರು ಹಾಗೂ ಹೋರಾಟಗಾರರಾದ ಕೆ. ಎನ್. ಜಗದೀಶ್, ಮಧುಗಿರಿಯ ಅಡ್ವೊಕೇಟ್ ಪುಟ್ಟಮ್ಮ ಜಿ. ವಿ., ವಕೀಲರಾದ ಕೊಡ್ಲಾಹಳ್ಳಿ ಪರಮೇಶ್ವರಾದ್ಯ ಹಾಗೂ ಕಾನೂನು ವಿದ್ಯಾರ್ಥಿ ದೇವರಾಜು ಆರ್. ಕೈಜೋಡಿಸಿದ್ದಾರೆ.
ಅಲ್ಲದೆ, ವಿವಿಧ ಸಂಘಟನೆಗಳ ಪ್ರಮುಖರಾದ ಸಾಮಾಜಿಕ ಹೋರಾಟಗಾರ ಹಂದ್ರಾಳ ನಾಗಭೂಷಣ್, ಟಿ.ಹೆಚ್.ಮೈಲಾರಪ್ಪ ತಿಪ್ಪಾಪುರ (KDSO(R) ರಾಜ್ಯಾಧ್ಯಕ್ಷರು, ಶೋಷಿತರ ಭೂಮಿ ಹಕ್ಕು ಹೋರಾಟ ಸಮಿತಿ), ಪಿ.ಎನ್.ರಾಮಯ್ಯ (ಡಿ.ಎಸ್.ಎಸ್. ಜಿಲ್ಲಾಧ್ಯಕ್ಷರು, ತುಮಕೂರು), ನರಸಿಂಹರಾಜು ಸಿ. ಎನ್. (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಸಿ/ಎಸ್ ಟಿ ಘಟಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಮಂಜುಸ್ವಾಮಿ ಎಂ. ಎನ್. (ಅಧ್ಯಕ್ಷರು, ಕರ್ನಾಟಕ ರಣಧೀರರ ವೇದಿಕೆ), ರಂಗನಾಥ್ ಆರ್. ಎಸ್. (ಉಪಾಧ್ಯಕ್ಷರು, ಕರ್ನಾಟಕ ಕನ್ನಡ ಪರ ವೇದಿಕೆ), ನಟರಾಜು ಕೆ.ಎನ್. (ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಕೊರಟಗೆರೆ), ನಟರಾಜ್ ಮೌರ್ಯ ಎನ್. (ತಾಲೂಕು ಅಧ್ಯಕ್ಷರು, ಭೀಮ್ ಆರ್ಮಿ, ಮಧುಗಿರಿ), ಶ್ರೀನಿವಾಸ ಎಸ್. (ಕರ್ನಾಟಕ ಜನಪರ ಹೋರಾಟ ಸಮಿತಿ (ರಿ) ಹಾಗೂ ಮುಖಂಡರಾದ ಶಿವಕುಮಾರ್ (ಅಧ್ಯಕ್ಷರು, ಸಹಕಾರ ಸಂಘ ಮಧುಗಿರಿ ಹಾಗೂ ಮಾಜಿ ಗ್ರಾ.ಪಂ. ಸದಸ್ಯರು, ತಾಯಿಗೊಂಡನಹಳ್ಳಿ), ಜೆ. ಸಿ. ಬಿ. ವೆಂಕಟೇಶ್, ರಂಟವಾಳ ಪ್ರಸನ್ನ ಕುಮಾರ್ (ಪ್ರಜಾಸೇನ ಕರ್ನಾಟಕ), ಪ್ರಕಾಶ್ (ಸಮೃದ್ಧಿ ಫೌಂಡೇಶನ್), ನೀರಾವರಿ ಹೋರಾಟಗಾರ ಮಧು (ಚಿಕ್ಕನಾಯಕನಹಳ್ಳಿ), ಚೇತನ್ ದಾಸರಹಳ್ಳಿ, ಶ್ರೀನಿವಾಸ ಹಾಗೂ ವಿನಯ್ ದುಡ್ಡನಹಳ್ಳಿ ಸೇರಿದಂತೆ ಅನೇಕರು ಈ ಜನಪರ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದಾರೆ.
ಬಿಸಿಲು–ಮಳೆಯೆನ್ನದೆ ಹತ್ತಾರು ಕಿಲೋಮೀಟರ್ ಹೆಜ್ಜೆ ಹಾಕಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲಿಗೆ ಬರುತ್ತಿರುವ ಅನ್ನದಾತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಜಿಲ್ಲಾಡಳಿತವು ಈ ಜಾಥಾವನ್ನು ಕೇವಲ ಒಂದು ಪ್ರತಿಭಟನೆಯಾಗಿ ನೋಡದೆ, ಬಡ ರೈತರ ಬದುಕಿನ ಪ್ರಶ್ನೆಯಾಗಿ ಪರಿಗಣಿಸ ಬೇಕು.
ಜಿಲ್ಲಾಡಳಿ ತಕ್ಷಣವೇ ಮಧುಗಿರಿ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸಭೆಯನ್ನು ತಕ್ಷಣವೇ ನಿಗದಿಪಡಿಸಿ, ಬಾಕಿ ಇರುವ ಫಾರಂ ನಂ. 50, 53 ಮತ್ತು 57ರ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿ ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪಾರದರ್ಶಕವಾಗಿ ಅರ್ಹ ಬಡ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು. ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಬಡ ಸಾಗುವಳಿದಾರರನ್ನು ಭೂಮಿಯಿಂದ ಒಕ್ಕಲೆಬ್ಬಿಸದಂತೆ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸ್ಪಷ್ಟ ಆದೇಶ ನೀಡಬೇಕು ಎನ್ನುವುದು ಹೋರಾಟಗಾರರ ಒತ್ತಾಯವಾಗಿದೆ.
“ನಾನು ಬರುತ್ತೇನೆ, ನೀವು ಬನ್ನಿ, ನಿಮ್ಮವರನ್ನೂ ಕರೆತನ್ನಿ!” ಎಂಬುದು ಕೇವಲ ಜಾಥಾದ ಘೋಷವಾಕ್ಯವಲ್ಲ; ಅದು ಅನ್ಯಾಯದ ವಿರುದ್ಧ ಸಿಡಿದೇಳುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆತ್ಮಸಾಕ್ಷಿಯ ಕರೆಯಾಗಿದೆ. ಅನ್ನ ನೀಡುವ ರೈತ ಇಂದು ತನ್ನ ಹಕ್ಕಿನ ಭೂಮಿಗಾಗಿ ಬೀದಿಯಲ್ಲಿ ನಡೆಯುತ್ತಿದ್ದಾನೆ ಎಂದರೆ, ಆತನ ಬೆಂಬಲಕ್ಕೆ ನಿಲ್ಲುವುದು ಸಮಾಜದ ಪ್ರತಿಯೊಬ್ಬರ ನೈತಿಕ ಕರ್ತವ್ಯ.
ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮಧುಗಿರಿ ರೈತರಿಗೆ ನ್ಯಾಯ ಒದಗಿಸಿಕೊಡಲಿ. ಬಡವರ, ರೈತರ ಹಾಗೂ ಶೋಷಿತರ ಪರವಾದ ಈ ನ್ಯಾಯಯುತ ಹೋರಾಟಕ್ಕೆ ‘ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ’ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಅನ್ನದಾತನಿಗೆ ನ್ಯಾಯ ಸಿಗುವವರೆಗೂ ನಮ್ಮ ಲೇಖನಿ ವಿಶ್ರಮಿಸುವುದಿಲ್ಲ.
— ನಟರಾಜು ಜಿ. ಎಲ್., ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ
ಸಂಪರ್ಕ: 9741717700 | nammatumakuru9@gmail.com
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
