ತುಮಕೂರು: ತಾಲೂಕಿನ ಕುಚ್ಚಂಗಿ ಗ್ರಾಮದ ಕೆರೆಯಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಮೂರು ಮೃತದೇಹಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಾ ಗೇಟ್ ಬಡಾವಣೆಯಲ್ಲಿ ವಾಸವಾಗಿರುವ ಪಾತರಾಜು ಮತ್ತು ಗಂಗರಾಜು ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಈಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಆರೋಪಿಗಳು ಈಗಾಗಲೇ ಕೊಲೆಯಾಗಿರುವ ಇಶಾಕ್ ಸೀಮಮ್, ಶಾಹುಲ್ ಹಮೀದ್, ಸಿದ್ದಿಕ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೆ, ಈ ಮೂವರು ಮೃಪಟ್ಟವರು ಆರೋಪಿ ಪಾತರಾಜುವಿನ ಜೊತೆ ಸೇರಿ ಸುಮಾರು ಆರು ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದರು.
ಪಾತರಾಜನಿಗೆ ಸುಮಾರು ಆರು ಲಕ್ಷ ರೂ. ಹಣವನ್ನು ನೀಡಿದ್ದರು. ಹಣ ಪಡೆದು ಆರು ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ, ಹಣ ವಾಪಸ್ ಕೊಡುವಂತೆ ಇಲ್ಲವಾದರೆ, ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರು. ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ ಪುಟ್ಟಸ್ವಾಮಯ್ಯ, ನವೀನ್, ಕೃಷ್ಣ, ಗಣೇಶ, ಕಿರಣ್ , ಸೈಮನ್ ಅವರೊಂದಿಗೆ ಸೇರಿಕೊಂಡು, ಮೂರು ಜನರನ್ನು ಕೊಲೆ ಮಾಡಿದರೆ ಆರೋಪಿತರಿಗೆ 3 ಕೆ.ಜಿ. ಚಿನ್ನ ಕೊಡುವ ಆಮಿಷವನ್ನು ಒಡ್ಡಿದ್ದು, ಕೊಲೆ ಮಾಡುವ ಹಿಂದಿನ ಸಂಚು ಪಾತರಾಜು ರೂಪಿಸಿದ್ದನು.
ಮಾ.22ರಂದು ಬೆಳಗಿನ ಜಾವ 12 ಗಂಟೆಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಅವರನ್ನು ಮಚ್ಚು , ಲಾಂಗ್, ಡರ್ಯಾಗರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ನಂತರ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296