ತಿಪಟೂರು: “ದಶಕಗಳಿಂದ ಭೂಮಿಯನ್ನು ನಂಬಿ ಬದುಕುತ್ತಿರುವ ರೈತರನ್ನು ಅರಣ್ಯ ಇಲಾಖೆ ಬಲವಂತವಾಗಿ ಒಕ್ಕಲೆಬ್ಬಿಸಲು ಯತ್ನಿಸಿದರೆ ತಾಲ್ಲೂಕಿನ ರೈತರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಇತ್ತೀಚಿನ ಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಸಂಸ್ಥಾನದ ಕಾಲದಲ್ಲಿದ್ದ ಕಾಗೆ ಹಳ್ಳ ಕಾವಲ್ (ಸರ್ವೆ ನಂ. 1) ಹಾಗೂ ಚೌಡ್ಲಾಪುರ ಅರಣ್ಯದ (ಸರ್ವೆ ನಂ. 15) ಭೂಮಿಯನ್ನು 1963-64ರಲ್ಲಿ ರಾಜ್ಯ ಸರ್ಕಾರವು ಬಡವರು, ದೀನದಲಿತರು ಹಾಗೂ ಯೋಧರ ಅನುಕೂಲಕ್ಕಾಗಿ ಮಂಜೂರು ಮಾಡಿತ್ತು. ಕಳೆದ 60 ವರ್ಷಗಳಿಂದ ಸುಮಾರು 130ಕ್ಕೂ ಹೆಚ್ಚು ಕುಟುಂಬಗಳು ಈ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿವೆ.
“ಸರ್ಕಾರವೇ ಈ ಭೂಮಿಯನ್ನು ಮಂಜೂರು ಮಾಡಿ, ರೈತರಿಗೆ ಸಾಗುವಳಿ ಚೀಟಿ ನೀಡಿ, ಕಂದಾಯ ದಾಖಲೆಗಳಲ್ಲಿ ದುರಸ್ತು ಮಾಡಿಕೊಟ್ಟಿದೆ. ಈ ಜಮೀನುಗಳಿಗೇ ಸರ್ಕಾರ ಬೋರ್‌ವೆಲ್ ಕೊರೆಯಲು ಅನುಮತಿ ನೀಡಿದೆ, ವಿದ್ಯುತ್ ಸಂಪರ್ಕ ಕಲ್ಪಿಸಿದೆ ಮತ್ತು ಬ್ಯಾಂಕುಗಳು ಸಾಲ ಸೌಲಭ್ಯವನ್ನೂ ನೀಡಿವೆ. ಹೀಗಿರುವಾಗ, 60 ವರ್ಷಗಳ ನಂತರ ಈಗ ದಿಢೀರನೆ ಇದು ಅರಣ್ಯ ಭೂಮಿ ಎಂದು ಹೇಳುವುದು ಎಷ್ಟು ಸರಿ?” ಎಂದು ಶಾಂತಕುಮಾರ್ ಪ್ರಶ್ನಿಸಿದರು.
ಅರಣ್ಯ ಇಲಾಖೆಯು ಈಗ ಈ ಜಮೀನು ತಮಗೆ ಸೇರಿದ್ದೆಂದು ರೈತರಿಗೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳುವ ಭೀತಿಯಲ್ಲಿವೆ. ಇಲಾಖೆಯ ಈ ನಡೆ ಖಂಡನೀಯವಾಗಿದ್ದು, ರೈತರ ಹಿತರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇರಲಗೆರೆ ಗ್ರಾಮದ ಪ್ರಕಾಶ್, ಶಂಕರಪ್ಪ, ಕೃಷ್ಣಮೂರ್ತಿ, ಸಿದ್ದೇಶ್, ಉಮಾದೇವಿ ಹಾಗೂ ಅಣ್ಣಾಮಾರನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


