ಬೀದರ: ಅಮೇಜಾನ್ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಅಮಾಯಕ ಡೆಲಿವರಿ ಬಾಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಗೌಳಿ ಗಲ್ಲಿಯ ವಿಜಯಕುಮಾರ ಬಿಡಕರ್ ಹಲ್ಲೆಗೊಳಗಾದ ಡೆಲವರಿ ಬಾಯ್ ಎಂದು ಗುರುತಿಸಲಾಗಿದೆ. ಹಿರಿಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದಾಗ, ಬುದ್ದಿ ಹೇಳಿ ಬಿಡಿಸಿದ ಕಾರಣಕ್ಕೆ ಇಲ್ಲಿನ ಬದ್ರೋದ್ದೀನ್ ಕಾಲೋನಿಯ ಮಹಮ್ಮದ್ ಅದ್ನಾನ್ ಮತ್ತು ಆತನ 10ಕ್ಕೂ ಹೆಚ್ಚು ಸಹಚರರು ಈ ದುಷ್ಕೃತ್ಯ ಎಸಗಿದ್ದಾರೆ.
ಮಂಗಳವಾರ ಪಾರ್ಸಲ್ ಗಳನ್ನು ಡೆಲವರಿ ಮಾಡಿ ಕಚೇರಿಗೆ ವಾಪಸ್ ತೆರಳುವಾಗ ಅದ್ನಾನ್ ಮತ್ತು ಇನ್ನಿಬ್ಬರು ವ್ಯಕ್ತಿಯೊಬ್ಬರ ಜತೆ ಜಗಳ ಆಡುತ್ತಿದ್ದರು. ಇದನ್ನು ಗಮನಿಸಿ ತಡೆಯಲು ಮುಂದಾದ ವಿಜಯಕುಮಾರಗೆ ನಿಂದಿಸಿದಲ್ಲದೇ, ಹಲ್ಲೆ ಮಾಡಿದ್ದಾರೆ.
ಈ ವೇಳೆ ವಿಜಯಕುಮಾರನ ಪರಿಚಿತರೊಬ್ಬರು ತಡೆದಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಅದ್ನಾನ್, ನಂತರ 10 ಕ್ಕೂ ಹೆಚ್ಚು ಯುವಕರ ಜತೆಗೆ ಅಮೆಜಾನ್ ಕಚೇರಿಗೆ ಹೋಗಿ ಮತ್ತೆ ವಿಯಕುಮಾರಗೆ ಮನಬಂದಂತೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ಕಚೇರಿಯಲ್ಲಿದ್ದ ಇನ್ನಿಬ್ಬರು ಸಿಬ್ಬಂದಿಗಳಿಗೂ ಹೊಡೆದು, ನಮ್ಮ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕೃತ್ಯ ಕಚೇರಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q