ಬೀದರ್: ಜಿಲ್ಲೆಯ ಔರಾದ ತಾಲೂಕಿನ ಕೌಠಾ(ಬಿ) ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಮುಸುಕುಧಾರಿಗಳು ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 25 ತೊಲೆ ಚಿನ್ನಾಭರಣ ಹಾಗೂ ನಗದು ಹಣ ದರೋಡೆಯಾಗಿದೆ ಎಂದು ಆರೋಪಿಸಿದ ಪ್ರಕರಣ ಪೊಲೀಸ್ ತನಿಖೆಯಲ್ಲಿ ಸುಳ್ಳು ಎಂದು ಸಾಬೀತಾಗಿದೆ.
ಮನೆಯಲ್ಲಿ ನನ್ನ ಪತ್ನಿ ಒಬ್ಬಳೇ ಇದ್ದ ವೇಳೆ ಇಬ್ಬರು ಮುಸುಕುಧಾರಿಗಳು ಹಿಂಬಾಗಿಲಿನಿಂದ ಮನೆಗೆ ನುಗ್ಗಿ ಚಾಕುವಿನಿಂದ ಗಂಭೀರವಾಗಿ ಗಾಯಗೊಳಿಸಿ ಮನೆಯಲ್ಲಿದ್ದ 25 ತೊಲೆ ಚಿನ್ನಾಭರಣ ಹಾಗೂ 1 ಲಕ್ಷ ನಗದು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬದ ಮುಖ್ಯಸ್ಥ ಓಂಕಾರ ಅಪ್ಪಾರಾವ್ ಗಾದೆಗೆ ಎಂಬುವವರ ಫೆ.21ರಂದು ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ ದಿನವೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದರು. ಹಾಡುಹಗಲೇ ನಡೆದ ಈ ಘಟನೆಯಿಂದಾಗಿ ಜಿಲ್ಲೆಯ ಜನರಲ್ಲಿ ಭಾರೀ ಆತಂಕ ಆವರಿಸಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು 4 ತಂಡ ರಚಿಸಿ ಕೂಲಂಕಷವಾಗಿ ತನಿಖೆ ನಡಸಿದ್ದು, ಮನೆ ದರೋಡೆ ನಡೆದಿದೆ ಎನ್ನಲಾದ ಆರೋಪ ಸುಳ್ಳು ಎಂದು ಸಾಬೀತಾಗಿದೆ.
ದರೋಡೆಯಾಗಿದೆ ಎಂದು ಆರೋಪಿಸಿದ ಎಲ್ಲ ಚಿನ್ನಾಭರಣ ಹಾಗೂ ನಗದು ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ದೂರುದಾರ ಓಂಕಾರ ಗಾದೆಗೆ ಅವರ ಕುಟುಂಬ ಆರ್ಥಿಕ ಬಿಕ್ಕಟ್ಟು ಹಾಗೂ ಸಾಲದ ಸುಳಿಯಿಂದ ಪಾರಾಗಲು ಪೊಲೀಸರಿಗೆ ಈ ರೀತಿ ಸುಳ್ಳು ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ ಎಂಬುದು ತನಿಖೆಯಿಂದ ಕಂಡು ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ
ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ಪ್ರಾಣಹಾನಿ ಕಾಪಾಡಲು ಜಿಲ್ಲಾ ಪೊಲೀಸ್ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಸಂತಪೂರ ಠಾಣೆಯಲ್ಲಿ ದಾಖಲಾಗಿದ್ದ ಈ ಸುಳ್ಳು ದರೋಡೆ ಪ್ರಕರಣವನ್ನು ಚಾಕಚಕ್ಯತೆಯಿಂದ ಕಂಡು ಹಿಡಿದ ಎಲ್ಲ ಪೊಲೀಸ್ ಅಧಿಕಾರಿ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಎಸ್ಪಿ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4