ರಾಯಚೂರು: ರೈತನೊಬ್ಬನಿಂದ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತಿ ಪಿಡಿಓಗೆ ರಾಯಚೂರು ಜಿಲ್ಲಾ ನ್ಯಾಯಾಲಯವು 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2017ರಲ್ಲಿ ಗೋರೆಬಾಳ ತಾಂಡಾದ ಚೇತನ ಎಂಬ ರೈತರು ತಮ್ಮ ಜಮೀನಿನಲ್ಲಿ ಶೇಡ್ ನಿರ್ಮಾಣ ಮಾಡಲು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅನುದಾನ ಬಿಡುಗಡೆ ಮಾಡಲು ಆಗಿನ ಪಿಡಿಓ ಮಹ್ಮದ್ ಖಾಜಾ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಚೇತನ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದರು. ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹ್ಮದ್ ಖಾಜಾರನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಈ ಪ್ರಕರಣ ಒಂದು ಕುತೂಹಲಕಾರಿ ತಿರುವು ಪಡೆದುಕೊಂಡಿತ್ತು. ಪಿಡಿಓ ವಿರುದ್ಧ ದೂರು ನೀಡಿದ್ದ ಚೇತನ್, ನ್ಯಾಯಾಲಯದ ಮುಂದೆ ವಿಚಾರಣೆ ವೇಳೆ ತನ್ನ ಹೇಳಿಕೆಯನ್ನು ಬದಲಿಸಿ ‘ಪ್ರತಿಕೂಲ ಸಾಕ್ಷಿ’ (Hostile Witness) ನೀಡಿದ್ದರು. ಅಂದರೆ, ಆರೋಪಿಯ ಪರವಾಗಿ ಸುಳ್ಳು ಸಾಕ್ಷಿ ಹೇಳಿದ್ದರು.
ದೂರುದಾರ ಸುಳ್ಳು ಸಾಕ್ಷಿ ಹೇಳಿದರೂ ಸಹ, ಸರ್ಕಾರಿ ಅಭಿಯೋಜಕರು ಮಂಡಿಸಿದ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಪಿಡಿಓ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿತು.
ಇದರ ಜೊತೆಗೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಸುಳ್ಳು ಸಾಕ್ಷಿ ನುಡಿದ ದೂರುದಾರ ಚೇತನ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಲಯದ ಶಿರಸ್ತೇದಾರರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಇದು ಲಂಚದ ಪ್ರಕರಣಗಳಲ್ಲಿ ಸಾಕ್ಷಿ ನುಡಿಯುವಾಗ ಅಡ್ಡದಾರಿ ಹಿಡಿಯುವವರಿಗೆ ಒಂದು ಎಚ್ಚರಿಕೆಯ ಸಂದೇಶವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


