ಲಕ್ನೋ: ಪತಿ ಮತ್ತು ಮಾವ ಸೇರಿ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಥಳಿಸಿದ್ದಲ್ಲದೇ ಆಕೆಯ ಬಾಯಿಗೆ ಕೀಟನಾಶಕವನ್ನು ಸುರಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಪತಿ ಮತ್ತು ಮಾವ ಮಹಿಳೆಗೆ ಥಳಿಸಿದ್ದಲ್ಲದೆ, ಆಕೆಯನ್ನು ಕೊಲ್ಲುವ ಉದ್ದೇಶದಿಂದ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಸುರಿದಿದ್ದಾರೆ.
ಈ ವೇಳೆ ಸಹೋದರ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆತನಿಗೂ ಥಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ವಿವರ: ಹಾಪುರ್ ಜಿಲ್ಲೆಯ ಗರ್ಮುಕ್ತೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಗದ್‌ಪುರ ಗ್ರಾಮದ ನಿವಾಸಿ ಶೀಲಾ ಅವರು ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್‌ಪುರ ಗ್ರಾಮದ ಸುರೇಂದ್ರ ಎಂಬಾತನನ್ನು ವಿವಾಹವಾಗಿದ್ದರು. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಪೋಷಕರಿಗೆ ಶೀಲಾಳ ಮೇಲೆ ನಡೆದ ಹಲ್ಲೆಯ ಬಗ್ಗೆ ಮಾಹಿತಿ ಲಭಿಸಿದೆ.
ವಿಚಾರ ಗೊತ್ತಾಗುತ್ತಿದ್ದಂತೆಯೇ ಶೀಲಾಳ ಸಹೋದರ ಜಯಪ್ರಕಾಶ್ ತನ್ನ ಸ್ನೇಹಿತನ ಜೊತೆ ನೇರವಾಗಿ ಆಕೆಯ ಮನೆಗೆ ಬಂದರು. ಈ ವೇಳೆ ಸಹೋದರನ ಮುಂದೆಯೇ ಪತಿ ಮತ್ತು ಮಾವ ಸೇರಿ ಆಕೆಯ ಕೈಕಾಲು ಕಟ್ಟಿ ಥಳಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಸಹೋದರ ತಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಹೋದರನ ಸಮ್ಮುಖದಲ್ಲಿಯೇ ಆರೋಪಿಗಳಿಬ್ಬರೂ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಬಲವಂತವಾಗಿ ಸುರಿದಿದ್ದಾರೆ. ಪರಿಣಾಮ ಆಕೆಯ ಸ್ಥಿತಿ ಹದಗೆಟ್ಟಿದೆ. ಕೂಡಲೇ ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಹರೀಶ್ ವರ್ಧನ್ ಸಿಂಗ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


