ತುಮಕೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೀ ಒಬ್ಬ ವ್ಯಕ್ತಿಯಾಗಿರದೇ ಈ ನಾಡಿನ ಶಕ್ತಿಯಾಗಿದ್ದರು. ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲೆಯ ಹಿರಿಯ ಹರಿಕಥಾ ವಿದ್ವಾಂಸ, ಕೇಂದ್ರ ನಾಟಕ ಸಂಗೀತ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣ್ ದಾಸ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಎಸ್ ಐಎಫ್ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬುಧವಾರ ನಗರದ ಉತ್ತರ ಬಡಾವಣೆ ಶಿರಾ ರಸ್ತೆಯಲ್ಲಿರುವ ಕೆ.ಎಸ್ .ಐ.ಎಫ್. ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಭಾರತರೆತ್ನ ಡಾ: ಬಿ.ಆರ್. ಅಂಬೇಡ್ಕರ್ ಓದು ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾಗಿದ್ದ ಎಲ್ಲಾ ಸಮುದಾಯಗಳ ಪ್ರತಿನಿಧಿಯಾಗಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅಂಬೇಡ್ಕರ್ ಸೇವೆ ಸಲ್ಲಿಸಿದ್ದರು. ಭಾರತದ ಸಂವಿಧಾನ ರಚನಾ ಸಮಿತಿಯ ಕರಡು ಅಧ್ಯಕ್ಷರಾಗಿ ಅವರು ಬೃಹತ್ ಮತ್ತು ಶ್ರೇಷ್ಠ ಸಂವಿಧಾನವನ್ನು ನೀಡಿದರು. ಅಸ್ಪೃಶ್ಯತೆ ನಿವಾರಣೆಗೆ, ಮಹಿಳೆಯರ ಹಕ್ಕುಗಳಿಗೆ ಮತ್ತು ಸಮಾನತೆಗೆ ಜೀವನಪರ್ಯಂತ ಹೋರಾಡಿದರು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾಜದ ಎಲ್ಲಾ ವಿಭಾಗಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿದೆ. ಇಲಾಖೆಯು ಡಾ: ಬಿ.ಆರ್. ಅಂಬೇಡ್ಕರ್ ಅವರ ಬೃಹತ್, ಭಾಷಣ, ಸಂವಿಧಾನ ರಚನಾ ಸಭೆಯ ಚರ್ಚೆ, ನಡವಳಿ ಮೊದಲಾದ ಪುಸ್ತಕಗಳನ್ನು ಹೊರತಂದಿದ್ದು, ಈ ಪುಸ್ತಕಗಳನ್ನು ಕೊಂಡು ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೇರೆ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿದೆ. ಅವರ ಹಾದಿಯಲ್ಲಿ ನಡೆಸುವುದು ನಮ್ಮ ಕರ್ತವ್ಯ. ಅವರು ಈ ದೇಶಕ್ಕೆ ನೀಡಿದ ಮೀಸಲಾತಿ ನೀತಿಯಡಿ ಬಡವರಿಗೆ ಅದರಲ್ಲೂ ತುಳಿತಕ್ಕೆ ಒಳಗಾದ ಎಲ್ಲಾ ಸಮುದಾಯಗಳು ಸಮಾನತೆಗೆ ಬರಲು ಸಹಾಯಕವಾಯಿತು ಎಂದು ತಿಳಿಸಿದರು.
ಕೆ.ಎಸ್.ಐ.ಎಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರಾದ ಡಾ.ಆರ್. ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಡಾ: ಬಿ.ಆರ್. ಅಂಬೇಡ್ಕರ್ ಅವರ ಹುಟ್ಟು, ಬಾಲ್ಯ, ಕುಟುಂಬ, ಅವರು ಎದುರಿಸಿದ ಅನೇಕ ಕಷ್ಟ, ಸಾಮಾಜಿಕ ತಾರತಮ್ಯದ ಬಗ್ಗೆ ವಿವರಿಸಿದರು. ವಿದೇಶಗಳಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದು ಎಲ್ಲರಿಗೂ ಮಾದರಿಯಾದರು. ಇವರನ್ನು ಆದರ್ಶವಾಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ: ಟಿ.ಪಿ. ಕುಮಾರಸ್ವಾಮಿ ಹಾಗೂ ಪಿ. ರಾಮಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ವಿ. ಸುರೇಶ್ ಕುಮಾರ್ ಮೊದಲಾದವರು ಹಾಜರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಐದು ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
