ಬೆಂಗಳೂರು: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿರುವ ಕರ್ನಾಟಕದ ನಿವಾಸಿಗಳ ಗುರುತು ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನಾಪತ್ತೆಯಾದವರ ಹತ್ತಿರದ ಸಂಬಂಧಿಕರ ಡಿಎನ್ ಎ (DNA) ಮಾದರಿ ಸಂಗ್ರಹಣೆ ಹಾಗೂ ಪರಿಶೀಲನೆಗಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಅಧಿಕೃತ ‘ನೋಡಲ್ ಕೇಂದ್ರ’ವನ್ನಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಘೋಷಿಸಿದೆ.
ನೇಪಾಳದಲ್ಲಿ ಪತ್ತೆಯಾಗುತ್ತಿರುವ ಮೃತದೇಹಗಳನ್ನು ಗುರುತಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ನೇಪಾಳ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಡಿಎನ್ ಎ ಪ್ರೊಫೈಲ್ ಪರಿಶೀಲನೆ ಹೇಗೆ?
ಗುರುತಿಸಲಾಗದ ಮೃತದೇಹಗಳ ಡಿಎನ್ ಎ ಪ್ರೊಫೈಲ್ ಗಳನ್ನು ನೇಪಾಳದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಅವುಗಳನ್ನು ಪರಿಶೀಲಿಸಲು ಸಂತ್ರಸ್ತರ ರಕ್ತ ಸಂಬಂಧಿಕರ ಡಿಎನ್ ಎ ಮಾದರಿಗಳ ಅಗತ್ಯವಿದೆ. ನಾಪತ್ತೆಯಾಗಿರುವವರ ಮೊದಲ ಹಂತದ ಸಂಬಂಧಿಕರಾದ (ತಂದೆ, ತಾಯಿ, ಮಗ, ಮಗಳು ಅಥವಾ ಪತಿ/ಪತ್ನಿ) ಕುಟುಂಬದವರು ಬೌರಿಂಗ್ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ.
ಸಂಬಂಧಿಕರು ಬರುವಾಗ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು:
- ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
- ಆಧಾರ್ ಕಾರ್ಡ್ನಂತಹ ಸರ್ಕಾರಿ ಗುರುತಿನ ಚೀಟಿ
- ನಾಪತ್ತೆಯಾದವರೊಂದಿಗೆ ಹೊಂದಿರುವ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳು
ಸಂಬಂಧದ ಪರಿಶೀಲನೆ ಪೂರ್ಣಗೊಂಡ ಬಳಿಕ ಡಿಎನ್ಎ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗುತ್ತದೆ. ಅಲ್ಲಿಂದ ಡಿಎನ್ ಎ ಪ್ರೊಫೈಲ್ ಗಳನ್ನು ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಗುರುತಿಸಲಾಗದ ಮೃತದೇಹಗಳ ಪೈಕಿ ಕರ್ನಾಟಕದ ಸಂತ್ರಸ್ತರನ್ನು ಸುಲಭವಾಗಿ ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲು ನೆರವಾಗಲಿದೆ.
ಇದನ್ನೂ ಓದಿ: ತುಮಕೂರು: ಗೊಲನ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
