ತುಮಕೂರು: ನಮ್ಮ ಸಂವಿಧಾನವು ವ್ಯಕ್ತಿ ಅಥವಾ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಬದಲಿಗೆ ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ನಮ್ಮ ಸಂವಿಧಾನದ ಆತ್ಮವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕರಾದ ಡಾ. ಸುಧಾಕರ ಹೊಸಳ್ಳಿ ತಿಳಿಸಿದರು.
ವಿವಿ ಕಲಾ ಕಾಲೇಜಿನ ಇತಿಹಾಸ ಉಪನ್ಯಾಸ ಡಾ.ಮಹೇಶ್ ಕುಮಾರ್ ಅವರ ‘ಅಂಬೇಡ್ಕರ್ ಚಿಂತನೆಗಳು: ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಣೆ’ ಕೃತಿಯನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಸಮಾನತೆಯನ್ನು ಪ್ರತಿಪಾದಿಸುವಲ್ಲಿ ಮತ್ತು ಸಮಾಜವನ್ನು ಮುಟ್ಟುವಂತಹ ಕೃತಿಗಳನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅಂಬೇಡ್ಕರ್ ಅವರ ವಿಷಯಗಳನ್ನು ರಮಣೀಯವಾಗಿ ಮಾತನಾಡುವುದಕ್ಕೆ ಸಾಧ್ಯವಿಲ್ಲ. ಅವು ಗಂಭೀರವಾಗಿ ಚರ್ಚಿಸಬೇಕಾದ ವಿಷಯಗಳು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಂತಹ ದೊಡ್ಡ ವಿಷಯ. ಶೈಕ್ಷಣಿಕ ವೇದಿಕೆಗಳಲ್ಲಿ ಅಂಬೇಡ್ಕರ್ ಚಿಂತನೆಗಳ ವೈಶಾಲ್ಯತೆಯನ್ನು ಸಾಮೂಹಿಕವಾಗಿ ನೆನಪಿಸಿಕೊಳ್ಳುವುದು ಅತ್ಯಗತ್ಯ. ಅವರು ಭಾರತದ ಆಶಾಕಿರಣ ವಾಗಿದ್ದು ಅವರ ಬರಹಗಳು ಮತ್ತು ಭಾಷಣಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.
1986ರವರೆಗೆ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹೋರಾಡಿದ ಅಂಬೇಡ್ಕರ್, ಕೇವಲ ಸಮಸ್ಯೆಗಳನ್ನು ಮುಂದಿಡದೆ, ಬೌದ್ಧ ಧರ್ಮದ ಮೂಲಕ ಪರಿಹಾರವನ್ನು ಸೂಚಿಸಿದರು. ವಿಶ್ವವಿದ್ಯಾನಿಲಯಗಳು ಅಂಬೇಡ್ಕರ್ ಅವರ ರಾಜಕೀಯ ಚಿಂತನೆಗಳನ್ನು ಪ್ರಚಾರ ಮಾಡಬೇಕು ಮತ್ತು ವಿದ್ಯಾರ್ಥಿಗಳು ಸಮಾಜವನ್ನು ತಲುಪುವಂತಹ ಜಾಗತಿಕ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಮಾನವ ನಾಗರಿಕತೆ ಇರುವವರೆಗೂ ಅಂಬೇಡ್ಕರ್ ಚಿಂತನೆಗಳು ಜೀವಂತವಾಗಿರುತ್ತವೆ. ಆದರೆ ಅವರನ್ನು ಯಾವುದೋ ಜಾತಿ ಸಮುದಾಯಗಳಿಗೆ ಸೀಮಿತಗೊಳಿಸಬಾರದು. ಎಲ್ಲರೂ ಅವರ ಚಿಂತನೆಗಳನ್ನು ಬಳಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ದುಷ್ಟತನ ಮತ್ತು ದೌರ್ಜನ್ಯಗಳನ್ನು ತಡೆಯಲು ಮತ್ತು ಅಸ್ಪೃಶ್ಯರ ಬಗ್ಗೆ ಕಾನೂನಿನ ಅರಿವು ಮೂಡಿಸಲು ಅಂಬೇಡ್ಕರ್ ಚಿಂತನೆಗಳು ಸಹಾಯಕವಾಗಿದೆ. ತಪ್ಪು ಮಾಡುವವರಿಗೆ ಕಾನೂನಿನ ಭಯವಿರುತ್ತದೆ. ಏಕೆಂದರೆ ಅದು ಅವರನ್ನು ಬಿಡುವುದಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರೇ ಎಂದರು.
ಇತಿಹಾಸ ಮತ್ತು ಪುರಾತತ್ವಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ ಕೊಟ್ರೇಶ್ ಅವರು ಮಾತನಾಡಿ ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹರಡಿವೆ. ಇದು ಒಂದು ಸಾಗರದಂತಿದ್ದು, ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವವಾದ ವಿಷಯವಾಗಿದೆ. ಮಹೇಶ್ ಅವರ ಕೃತಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಸರಳವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿದೆ ಎಂದರು.
ಇತಿಹಾಸ ಪ್ರಾಧ್ಯಾಪಕ ಪ್ರೊ. ಎಲ್. ಪಿ. ರಾಜು, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಎನ್. ಹರಿಪ್ರಸಾದ್, ಡಾ. ಚಿಕ್ಕಣ್ಣ, ಡಾ. ಶ್ರೀನಿವಾಸ, ಕೃತಿಕಾರ ಡಾ. ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4