ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಎದುರಾಗಿದೆ. ಯಾಕೆಂದರೆ 7 ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರವು ಮಹತ್ವದ ಘೋಷಣೆ ಹೊರಡಿಸಿದೆ.
ಏಳನೇ ವೇತನ ಆಯೋಗವನ್ನು ರಚಿಸುವುದಾಗಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಗೂ ಈ ಸಂಬಂಧ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ಅಲ್ಲದೆ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳು CM ಸಿದ್ದರಾಮಯ್ಯ ಮತ್ತು DCM ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದು, 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮನವಿಯನ್ನು ಆಲಿಸಿದ ಸಿಎಂ ಮತ್ತು ಡಿಸಿಎಂ ಆದಷ್ಟು ಬೇಗನೇ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ.
ಅಂದಹಾಗೆ ಸರ್ಕಾರಿ ನೌಕಕರು ಲೋಕಸಭಾ ಚುನಾವಣೆಗೂ ಮೊದಲೇ 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದು, ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದರು. ಅಂತೆಯೇ ಚುನಾವಣೆ ಆರಂಭವಾಗುವ ಸಮಯದಲ್ಲಿ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಲಂಕಶವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು.
ಎಷ್ಟು ಹೆಚ್ಚಾಗುತ್ತೆ ಸಂಬಳ ?!
7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ 27.5% ಹೆಚ್ಚಳ ಮಾಡುವುದರ ಜೊತೆಗೆ ಅವರ ಕನಿಷ್ಠ ವೇತನವನ್ನು ತಿಂಗಳಿಗೆ 17,000 ರೂ.ನಿಂದ 27,000 ರೂ.ಗೆ ಹೆಚ್ಚಿಸುವಂತೆ ಆಯೋಗವು ಶಿಫಾರಸು ಮಾಡಿದೆ. ಒಟ್ಟಿನಲ್ಲಿ ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದ್ದು, 2022ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ಜಾರಿ ಮಾಡುವಂತೆ ಶಿಫಾರಸು ಮಾಡಿದೆ. ಬೆನ್ನಲ್ಲೇ ಸರ್ಕಾರವು ಮೂಲ ವೇತನದಲ್ಲಿ 27.5% ಹೆಚ್ಚಳ ಘೋಷಿಸಿದೆ.
ಅಂದಹಾಗೆ ಈಗಾಗಲೇ ಮಧ್ಯಂತರವಾಗಿ ಶೇ.17ರಷ್ಟು ಮೂಲ ವೇತನ ಹೆಚ್ಚಳ ಮಾಡಿದ್ದು, ಅಂತಿಮವಾಗಿ ಇನ್ನೂ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರೂ.ನಿಂದ 27,000 ರೂಪಾಯಿಗೆ ಏರಿಕೆಯಾಗಲಿದೆ. ಹಳೇಯ ಬೇಸಿಕ್ ಸ್ಯಾಲರಿ 20900 ಆದರೆ ಹೊಸ ವರದಿ ಪ್ರಕಾರ 33300ಕ್ಕೆ ಏರಿಕೆಯಾಗಲಿದೆ. 40,900 ಇದ್ದರೆ ಅದು 65,950ಕ್ಕೆ ಏರಿಕೆಯಾಗುತ್ತದೆ. ಬೇಸಿಕ್ 50,150 ಇದ್ದರೆ ವೇತನ ಆಯೋಗದ ವರದಿ ಪ್ರಕಾರ ಅದು 79,900 ಬೇಸಿಕ್‌ಗೆ ಬರಲಿದೆ. ಇದರ ಜೊತೆಗೆ ಡಿಎ, ಐಆರ್ ಎಲ್ಲವೂ ಸೇರಿಕೊಂಡು ಸಂಬಳ ಮತ್ತಷ್ಟು ಹೆಚ್ಚಾಗಲಿದೆ. ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ 1,04,600 ರೂಪಾಯಿಯಿದ್ದು, ಅದನ್ನು 1,67,200 ರೂಪಾಯಿಗೆ ಪರಿಷ್ಕರಿಸುವಂತೆ ಶಿಫಾರಸು ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


