ತುಮಕೂರು: ಕೋವಿಡ್19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ನೇಮಕ ಮಾಡಿಕೊಂಡಿರುವ ಆರೋಗ್ಯ ಇಲಾಖೆಯ 6,163 ನೌಕರರನ್ನು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಂಡು ಸೇವೆಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಕೊರೊನಾ ವಾರಿಯರ್ಸ್ ಪ್ರತಿಭಟನೆ ನಡೆಸಿದರು.
ಕೋವಿಡ್ -19ರ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು (ಫಾರ್ಮಸಿ ಅಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ಸ್ಟಾಫ್ ನರ್ಸ್,ಪಿ ಎಚ್.ಸಿ ಓ, ಗ್ರೂಪ್ – ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರ ಸಿಬ್ಬಂದಿಗಳು) ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಾವು ನಮ್ಮ ಕುಟುಂಬ, ಮನೆ-ಮಠ ಬಿಟ್ಟು, ನಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಜೊತೆಯಲ್ಲಿಯೇ ಸೇರಿದ ಕೆಲವು ಆರೋಗ್ಯ ಸಿಬ್ಬಂದಿ ಪ್ರಾಣಭಯದಿಂದ ಹಾಗೂ ಕೊರೊನ ಮಹಾ ಮಾರಿಗೆ ಹೆದರಿ ಅರ್ಧದಲ್ಲೇ ಕೆಲಸವನ್ನು ಬಿಟ್ಟು ಹೋದರು. ಆದರೆ ನಮ್ಮಲ್ಲಿ ಹಲವರಿಗೆ ಹಲವು ಬಾರಿ ಕೊರೂನಾ ಪಾಸಿಟಿವ್ ಬಂದು ಸಾವಿನ ಕದ ತಟ್ಟಿದರೂ ಸೋಲು ಒಪ್ಪದೆ ಪುನಃ ಕರ್ತವ್ಯಕ್ಕೆ ಮರಳಿ ಕರ್ತವ್ಯವನ್ನು ಸಲ್ಲಿಸುತ್ತಿದ್ದೇವೆ ಎಂದರು.
ಕೊರೊನಾ ಲಸಿಕಾ ಅಭಿಯಾನದಲ್ಲಿ ಭಾರತದ ಐತಿಹಾಸಿಕ ಮೈಲುಗಲ್ಲಿನ ಸಾಧನೆಯಲ್ಲಿ ನಾವು ಸಹ ಭಾಗಿಯಾಗಿ ಕರ್ತವ್ಯ ಸಲ್ಲಿಸಿದ್ದೇವೆ. ಕಷ್ಟ ಕಾಲದಲ್ಲಿ ನಾವು ಸರ್ಕಾರದ ಜೊತೆಯಾಗಿ ನಿಂತು ದುಡಿಯುತ್ತಿದ್ದೇವೆ,. ಮುಂದೆಯು ಸಹ ದುಡಿಯಲು ಸಿದ್ಧರಿದ್ದೇವೆ. ಆದರೆ ಈ ಹಂತದಲ್ಲಿ ಕೊರೊನ ಹೆಚ್ಚಾಗುವುದರಿಂದಲೇ ಕೊರೊನ ವಾರಿಯರ್ಸ್ ಕೆಲಸ ಉಳಿಯುತ್ತಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ಕಡಿಮೆ ಆದ ಮೇಲೆ ನಮ್ಮನ್ನು ಕೆಲಸದಿಂದ ತೆಗೆದರೆ ಕೊರೊನಾ ವಾರಿಯರ್ಸ್ ಗಳಾದ ಫಾರ್ಮಸಿ ಅಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ಪಿ ಎಚ್ ಸಿ ಓ, ಗ್ರೂಪ್ – ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ, ಅಪರೇಟರ್ ಹಾಗೂ ಮತ್ತಿತರ ಕೊರೊನಾ ವಾರಿಯರ್ಸ್ ಗಳು ನಿರ್ಗತಿಕರಾಗಿ, ನಿರುದ್ಯೋಗಿಗಳಾಗಿ ಬೀದಿಗೆ ಬಂದು ಕೆಲಸಕ್ಕಾಗಿ ಅಲೆಯಬೇಕಾಗುತ್ತದೆ ಮತ್ತು ನಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ ತಾವುಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈಗಾಗಲೇ ಪ್ರಧಾನಿಗಳಾದ ಮೋದಿಜಿಯವರು ಕೊರೂನಾ ವಾರಿಯರ್ಸ್ ಆಗಿ 100 ದಿನಗಳ ಕಾಲ ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯನ್ನು ಒದಗಿಸಿ ಮುಂಬರುವ ಸರ್ಕಾರಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಅದೇಶ ಹೊರಡಿಸಿದರೆ, ಸುಮಾರು 4,000 ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗಳಿಗೆ ಮತ್ತು ಅವರ ಕುಟುಂಬದವರಿಗೆ ಆಧಾರವಾಗುತ್ತದೆ ಎಂದು ಅವರು ಮನವಿ ಮಾಡಿಕೊಂಡರು.
ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದು, ರಾಜ್ಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಅಂಕಿಸಂಖ್ಯೆ ಸಮೇತ ಪತ್ರಿಕೆ, ಅಂತರ್ಜಾಲ ಹಾಗೂ ಮಾಧ್ಯಮದಲ್ಲಿ ವರದಿಯಾಗಿರುವುದರಿಂದ ತಾವು ಇದನ್ನು ಪರಿಶೀಲಿಸಿ ಖಾಲಿ ಇರುವ ಸ್ಥಳಗಳಿಗೆ ಅಸ್ಪತ್ರೆಗಳಿಗೆ ನಮ್ಮ ಸೇವಾಕಾರ್ಯವನ್ನು ಹಾಗೂ ಅನುಭವವನ್ನು ಪರಿಗಣಿಸಿ ಮಾನವೀಯತೆ ದೃಷ್ಠಿಯಿಂದ ನಮ್ಮನ್ನು ಖಾಲಿ ಇರುವ ಸ್ಥಳಗಳಿಗೆ ನೇಮಿಸಿದರೆ ನಮಗೂ ಉದ್ಯೋಗ ದೊರಕಿ ನಮ್ಮೆಲ್ಲರ ಕುಟುಂಬಗಳಿಗೆ ಭದ್ರತೆ ದೊರಕಿದಂತಾಗುತ್ತದೆ. ಈಗಾಗಲೇ ಹಲವಾರು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ತರಬೇತಿ ಮತ್ತು ಯೋಜನೆಗಳ ಬಗ್ಗೆ ಅರಿವು ಇರುವುದಿಂದ ತಾವುಗಳು ದಯಮಾಡಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ನಮ್ಮ ಜೀವನಕ್ಕೆ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy