ಲೋಕಸಭಾ ಚುನಾವಣೆ ಮುಗಿದು, ಬಿಜೆಪಿ ಗರ್ವಭಂಗವಡಗಿ ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಹಾಗೂ 7 ಪ್ರಮಾಣವಚನ ಸ್ವೀಕಾರ ಮಾಡಿ, ಖಾತೆ ಹಂಚಿಕೆಯೂ ಮುಗಿದಿದೆ. ಆದರೀಗ ಉಳಿದಿರುವುದು ಸ್ಪೀಕರ್ ಹುದ್ದೆ ಮಾತ್ರ. ಹೀಗಾಗಿ ಲೋಕಸಭಾ ಸಭಾಧ್ಯಕ್ಷರು ಯಾರಾಗಬಹುದು ಎಂಬ ಕುತೂಹಲ ಕೆರಳಿದೆ. ಆದರೀಗ ಬಿಜೆಪಿ ಜಾಣ ಹೆಜ್ಜೆ ಇಟ್ಟಿದ್ಧು ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ಪುರಂದೇಶ್ವರಿಯನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ತೀರ್ಮಾನ ಮಾಡಿದೆ ಎನ್ನಲಾಗಿದೆ.
ಲೋಕಸಭೆಯ ಸ್ಪೀಕರ್ ಹುದ್ದೆಯನ್ನು NDA ಮಿತ್ರ ಪಕ್ಷಗಳು ತಮಗೆ ಬೇಕೆಂದು ಬೇಡಿಕೆ ಇಟ್ಟಿದ್ದವು. ಆದರೆ ಬಿಜೆಪಿ ಮಾತ್ರ ತನ್ನಲ್ಲೇ ಉಳಿಸಿಕೊಳ್ಳಲು ಭರ್ಜರಿ ಬಾಣ ಪ್ರಯೋಗಿಸಿದ್ದು, ಅದು ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭೆಯ ನೂತನ ಸ್ಪೀಕರ್ ಹುದ್ದೆಯನ್ನು ಹಾಲಿ ರಾಜಮಂಡಿ ಕ್ಷೇತ್ರದ ಸಂಸದೆ ಮತ್ತು ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ ಡಿ. ಪುರಂದೇಶ್ವರಿಗೆ ನೀಡುವ ಸಾಧ್ಯತೆ ಇದೆ. ಈ ಚಾಣಾಕ್ಷ ನಡೆಯಿಂದ ಬಿಜೆಪಿ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ.
ಪುರಂದೇಶ್ವರಿ ಅವರು ಎನ್ ಡಿಎಯ ಪ್ರಮುಖ ಮೈತ್ರಿಪಕ್ಷ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬುನಾಯ್ಡು ಅವರ ಹತ್ತಿರದ ಬಂಧುವು ಆಗಿದ್ದಾರೆ. ಆರಂಭದಲ್ಲಿ ನಾಯ್ಡು ಅವರು ಎರಡು ಸಚಿವ ಸ್ಥಾನದ ಜೊತೆಗೆ ಸ್ಪೀಕರ್ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಅವರು ಈಗ ಬಿಜೆಪಿ ಪುರಂದೇಶ್ವರಿ ಹೆಸರನ್ನು ಪರಿಗಣಿಸಿದರೆ ಆಗಬಹುದು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.
ಇನ್ನು ಪುರಂದರೇಶ್ವರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕೂರಿಸಿದರೆ ಸರ್ಕಾರ ಮಹಿಳೆಯರ ಪರವಾಗಿ ಇದೆ ಎಂಬ ಸಂದೇಶವನ್ನು ರವಾನಿಸದಂತಾಗುತ್ತದೆ. ಅಷ್ಟೇ ಅಲ್ಲದೇ ಮಿತ್ರ ಪಕ್ಷವಾದ ಟಿಡಿಪಿ, ಜನಸೇನಾ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
ನಾಯ್ಡು ವಿರೋಧ ಯಾಕಿರುವುದಿಲ್ಲ?
ಪುರಂದೇಶ್ವರಿ ಟಿಡಿಪಿ(TDP) ಸಂಸ್ಥಾಪಕ ಎನ್.ಟಿ. ರಾಮರಾವ್ ಅವರ ಪುತ್ರಿ. ಪುರಂದೇಶ್ವರಿ ಅವರ ಸೋದರಿಯನ್ನೇ ಚಂದ್ರಬಾಬು ನಾಯ್ಡು ಮದುವೆಯಾಗಿರುವುದು. ಅವರು ನಾಯ್ಡು ಅವರ ನಾದಿನಿ ಆದರೂ ಬಿಜೆಪಿಯಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೆ ಆಂಧ್ರದಲ್ಲಿ ಬಿಜೆಪಿ ಮತ್ತು ಟಿಡಿಪಿ, ಜನಸೇನಾ ಮೈತ್ರಿಯಾಗಲು ಪುರಂದೇಶ್ವರಿ ಪಾತ್ರ ದೊಡ್ಡದು. ಈ ಕಾರಣಕ್ಕೆ ಪುರಂದೇಶ್ವರಿ ಹೆಸರು ಈಗ ಮುನ್ನೆಲೆಗೆ ಬಂದಿದೆ. ಹೀಗಾಗಿ ಪುರಂದೇಶ್ವರಿ ಆಯ್ಕೆಯನ್ನು ನಾಯ್ಡು ಕೂಡಾ ವಿರೋಧಿಸುವುದಿಲ್ಲ. ಜೊತೆಗೆ ಹುದ್ದೆಯೂ ಬಿಜೆಪಿಯಲ್ಲೇ ಉಳಿಯುತ್ತದೆ ಎನ್ನುವುದು ಬಿಜೆಪಿ ತಂತ್ರ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


