ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಮುಡಾದಿಂದ ನೀಡಿದ್ದ ನಿವೇಶನಗಳನ್ನು ಹಿಂಪಡೆಯುವ ಮೂಲಕ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿನ ಮಾತನಾಡಿದ ಅವರು ಸಾಕ್ಷ್ಯನಾಶದ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಲೋಕಾಯುಕ್ತ ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪತ್ರ ಬರೆದಾಕ್ಷಣ ಅದನ್ನು ಒಪ್ಪಿಕೊಂಡು ತರಾತುರಿಯಲ್ಲಿ ನಿವೇಶನ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಅವರು ಪ್ರಶ್ನಿಸಿದರು.
ಕೆಸರೆ ಗ್ರಾಮದ ಜಮೀನು ತಮದು. ಇದಕ್ಕೆ ಬದಲಿಯಾಗಿ ವಿಜಯನಗರದಲ್ಲಿ ನೀಡಿರುವ 14 ನಿವೇಶನಗಳ ಮೌಲ್ಯ 62 ಕೋಟಿ ರೂ.ಗಳಷ್ಟಾಗುತ್ತದೆ. ಅಷ್ಟು ಹಣ ಕೊಟ್ಟು ನಿವೇಶನ ವಾಪಸ್ ಪಡೆಯಲಿ, ನಾವು ಕಾನೂನುಬದ್ಧವಾದ ಜಮೀನಿನ ಮಾಲೀಕರು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಾದಿಸಿದ್ದರು.
ಈಗ ಅದು ಹೇಗೆ ಏಕಾಏಕಿ ನಿವೇಶನಗಳನ್ನು ವಾಪಸ್ ಮುಡಾಗೆ ದಾನ ಮಾಡಿಬಿಟ್ಟರು? ಎಂದು ಕಿಡಿ ಕಾರಿದರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡಿದ್ದು, ಹಗರಣವನ್ನು ಲೋಕಾಯುಕ್ತದ ತನಿಖೆಗೆ ಆದೇಶಿಸಲಾಗಿದೆ. ಹೀಗಾಗಿ ಮುಡಾ ನಿವೇಶನಗಳು ಈಗ ನ್ಯಾಯಾಲಯದ ಆಸ್ತಿ. ಹಾಗಿದ್ದಾಗ ಯಾವ ಆಧಾರದ ಮೇಲೆ ಅವುಗಳನ್ನು ವಾಪಸ್ ನೀಡಲು ಸಾಧ್ಯ? ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296