ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಅವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಡಿ.6ಕ್ಕೆ ಹೈಕೋರ್ಟ್ ಮುಂದೂಡಿದೆ.
ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲು ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆ.30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದೇಶ ಪಾಲನೆಗೆ ಮೂರು ತಿಂಗಳು ಅವಧಿ ವಿಸ್ತರಿಸುವಂತೆ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ, ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ಎಸ್ಸಿ, ಎಸ್ಟಿವರ್ಗ, ಹಿಂದುಳಿದ ವರ್ಗ ಎ ಹಾಗೂ ಬಿಗೆ ಮೀಸಲು ನಿಗದಿ ಮತ್ತು ರಾಜಕೀಯ ಮೀಸಲಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಕೆ ವಿಚಾರದಲ್ಲಿ ನ್ಯಾ.ಕೆ.ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ವರದಿ ಕೋರಲಾಗಿದೆ. ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ಹೇಳಿದೆ. ಹೊಸದಾಗಿ ಮೀಸಲು ನಿಗದಿಸಲು ಆಯೋಗದ ನಿಲುವು ಮುಖ್ಯವಾಗಿದೆ. ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.
ಸರ್ಕಾರದ ಈ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿ ಆಕ್ಷೇಪಣೆ ಸಲ್ಲಿಸಿರುವ ಚುನಾವಣಾ ಆಯೋಗ, 2022ರ ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಈಗಾಗಲೇ ಹೈಕೋರ್ಟ್ ಆದೇಶಿಸಿದೆ. ಇದಾದ ನಂತರ ಸಮಯ ವಿಸ್ತರಣೆ ಕೋರಿ ಸರ್ಕಾರ ಸಲ್ಲಿಸಿರುವ ಈ ಅರ್ಜಿ ವಿಚಾರಣಾ ಯೋಗ್ಯವಾಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy